ಲಕ್ಷ್ಮಿ ಮಾತುಗಳಿಗೆ ‘ಬ್ರೇಕ್‌’ ಹಾಕಿಸಿದ ಜಾರಕಿಹೊಳಿ !

7
ಜಿಲ್ಲಾ ಪಂಚಾಯ್ತಿ ಕೆಡಿಪಿ ತ್ರೈಮಾಸಿಕ ಸಭೆ

ಲಕ್ಷ್ಮಿ ಮಾತುಗಳಿಗೆ ‘ಬ್ರೇಕ್‌’ ಹಾಕಿಸಿದ ಜಾರಕಿಹೊಳಿ !

Published:
Updated:
Deccan Herald

ಬೆಳಗಾವಿ: ಕ್ಷೇತ್ರದ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತರುತ್ತಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಮಾತುಗಳಿಗೆ ಸಿಇಒ ಅವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ‘ಬ್ರೇಕ್‌’ ಹಾಕಿಸಿದ ಘಟನೆ ಜಿಲ್ಲಾ ಪಂಚಾಯ್ತಿಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶನಿವಾರ ನಡೆಯಿತು.

ಸಚಿವ ರಮೇಶ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದಿತ್ತು. ಜಿಲ್ಲೆಯ ವಿವಿಧ ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತರುತ್ತಿದ್ದರು. ಅದೇ ರೀತಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಗೆ ವಿವರಿಸಿದರು.

‘ಸ್ಥಳೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಂದ ಜನಪ್ರತಿನಿಧಿಗಳಿಗೆ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ನಾವು ದೂರವಾಣಿ ಕರೆ ಮಾಡಿದಾಗ, ಆಯಿತು ಮಾಡುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಾರೆ. ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡುತ್ತಾರೆ. ಆ ನಂತರ ಆ ಕಡೆ ತಲೆಯೂ ಹಾಕುತ್ತಿಲ್ಲ. ಜನರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಹೀಗಾದರೆ ಜನಪ್ರತಿನಿಧಿಗಳು ಯಾವ ರೀತಿ ಕೆಲಸ ನಿರ್ವಹಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ದಿನ ಬೆಳಗಾದರೆ ಹಲವರು ಫೋನ್‌ ಮಾಡುತ್ತಾರೆ. ಕಾಮಗಾರಿಗಳ ಬಗ್ಗೆ ವಿಚಾರಿಸುತ್ತಾರೆ. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಕೇಳುತ್ತಾರೆ. ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಬೇರು ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿದೆ. ನಾವು ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬೇಕಾಗಿಲ್ಲ. ಅಧಿಕಾರಿಗಳ ಸಹಕಾರವನ್ನು ಜನಪ್ರತಿನಿಧಿಗಳು ಬಯಸುತ್ತಾರೆ’ ಎಂದು ಹೇಳಿದರು.

ಸುಮಾರು 5 ನಿಮಿಷಗಳವರೆಗೆ ಲಕ್ಷ್ಮಿ ತಮ್ಮ ಅಹವಾಲು ಸಲ್ಲಿಸಿದರು. ಈ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಒಮ್ಮೆಯೂ ಲಕ್ಷ್ಮಿಯತ್ತ ಗಮನ ಹರಿಸಲಿಲ್ಲ. ನಂತರ ಮೆಲ್ಲಗೆ ಸಿಇಒ ರಾಮಚಂದ್ರನ್‌ ಆರ್‌. ಅವರತ್ತ ಸನ್ನೆ ಮಾಡಿದರು.

ತಕ್ಷಣ ಮಧ್ಯೆಪ್ರವೇಶಿಸಿದ ರಾಮಚಂದ್ರನ್‌, ‘ಮೇಡಂ, ದೂರವಾಣಿ ಕರೆ ಸ್ವೀಕರಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದು ಲಕ್ಷ್ಮಿ ಅವರ ಮಾತುಗಳನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಲಕ್ಷ್ಮಿ ಅವರ ಯಾವ ಮಾತಿಗೂ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಲಿಲ್ಲ.

ಜಿಲ್ಲೆ ವಿಭಜನೆ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸದ್ಯದಲ್ಲಿಯೇ ಜಿಲ್ಲೆಯನ್ನು ವಿಭಜಿಸಲಾಗುವುದು. ಬೆಳಗಾವಿಯ ಜೊತೆ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಯನ್ನು ರಚಿಸಲಾಗುವುದು ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.

ಶಾಸಕ ಮಹಾಂತೇಶ ಕೌಜಲಗಿ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರ ಮಾಡಲಗಿ ಅವರು ಬೈಲಹೊಂಗಲ ಅನ್ನು ಕೂಡ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮೇಶ ಜಾರಕಿಹೊಳಿ, ‘ಸರಿ, ನಾಲ್ಕು ಜಿಲ್ಲೆಗಳನ್ನಾಗಿ ಮಾಡುತ್ತೇವೆ ಬಿಡಿ’ ಎಂದು ಹಾಸ್ಯ ಧಾಟಿಯಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !