ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಪರ ಕಳಕಳಿಯುಳ್ಳ ನಾಯಕರನ್ನು ಹತ್ತಿಕ್ಕುವ ಪ್ರಯತ್ನ: ಸ್ವಾಮೀಜಿ

Last Updated 8 ಏಪ್ರಿಲ್ 2021, 15:46 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜಕೀಯ ಇತಿಹಾಸ ಗಮನಿಸಿದರೆ, ಲಿಂಗಾಯತ ಸಮಾಜದ ಪರ ಕಳಕಳಿಯುಳ್ಳ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಹಿಂದಿನಿಂದಲೂ ನಡೆದಿದೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮೀಸಲಾತಿ ಹೋರಾಟಕ್ಕೆ ಸಹಕರಿಸಿದವರಿಗೆ ಧನ್ಯವಾದ ಸಮರ್ಪಿಸಲು ನಗರದ ಗಾಂಧಿ ಭವನದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ‘ಶರಣು ಶರಣಾರ್ಥಿ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ನಮ್ಮ ಹೋರಾಟದ ಜೊತೆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದುತ್ವದ ಫೈರ್ ಬ್ರ್ಯಾಂಡ್ ಅಷ್ಟೇ ಅಲ್ಲ; ಲಿಂಗಾಯತ ಪಂಚಮಸಾಲಿ ಸಮಾಜದ ಫೈರ್ ಬ್ರ್ಯಾಂಡ್ ಕೂಡ ಹೌದು. ಅನ್ಯಾಯದ ವಿರುದ್ಧ ದನಿ ಎತ್ತುವ ಸಾಮರ್ಥ್ಯ ಅವರಿಗಿದೆ. ಹುಲಿ ಎಲ್ಲಿದ್ದರೂ ಹುಲಿಯೇ. ಬಹುಸಂಖ್ಯಾತ ಲಿಂಗಾಯತ ಪಂಚಮಸಾಲಿ ಜನಾಂಗದ ಶಕ್ತಿ ವರಿಷ್ಠರಿಗೆ ಗೊತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮಾಜ ರಾಜ್ಯದ ಒಟ್ಟು ಲಿಂಗಾಯತರಲ್ಲಿ ಶೇ.2ರಷ್ಟಿದೆ. ಪಂಚಮಸಾಲಿ ಸಮಾಜದ ಶೇ.80ರಷ್ಟಿದೆ. ಯತ್ನಾಳ ಅವರನ್ನು ಸಣ್ಣ ಪುಟ್ಟ ರಾಜಕಾರಣಿಗಳು ಕಡೆಗಣಿಸಬಹುದು. ಆದರೆ, ಬಿಜೆಪಿಯ ವರಿಷ್ಠರು ಕಡೆಗಣಿಸಲು ಸಾಧ್ಯವೇ ಇಲ್ಲ’ ಎಂದರು.

‘ಯಾರು ಸಮಾಜದ ಜೊತೆಗೆ ಇರುತ್ತಾರೋ ಅವರು ನಾಯಕರು. ಇರದವರು ನಾಲಾಯಕ್‌’ ಎಂದು ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

‘ಯತ್ನಾಳ ನಾಲಾಯಕ್ ರಾಜಕಾರಣಿ’ ಎಂಬ ಸಚಿವ ಮುರುಗೇಶ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಆ ವ್ಯಕ್ತಿ ಅಧಿಕಾರ ಸಿಕ್ಕ ಮೇಲೆ ಬದಲಾಗಿದ್ದಾರೆ. ಅಧಿಕಾರದ ಹುಚ್ಚು ಹಿಡಿದಿದೆ. ಅದಕ್ಕಾಗಿ ಮನಬಂದಂತೆ ಮಾತನಾಡುತ್ತಾರೆ’ ಎಂದು ಕಿಡಿಕಾರಿದರು.

‘ವಚನಾನಂದ ಸ್ವಾಮೀಜಿ ಸಮಾಜದ ಜೊತೆಗಿರಬೇಕು ಎಂದು ಬಯಸುತ್ತೇವೆ. ಬಂದಾಗ ಸ್ವಾಗತಿಸಿದ್ದೇವೆ. ಒಂದೇ ಪೀಠ, ಒಂದೇ ಸಂಘಟನೆ ಇರಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT