ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಉದ್ಯೋಗ ಮೇಳ ನಾಳೆಯಿಂದ: 200 ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆ

Last Updated 26 ಫೆಬ್ರುವರಿ 2020, 12:09 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಯುವಕ, ಯುವತಿಯರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗಾವಕಾಶ ಒದಗಿಸಲು ಫೆ. 28 ಹಾಗೂ 29ರಂದು ಪ್ರಾದೇಶಿಕ ಉದ್ಯೋಗ ಮೇಳವನ್ನು ನಗರದಲ್ಲಿ ಆಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಇಲ್ಲಿನ ಶಿವಬಸವನಗರದ ಎಸ್‌ಜಿಬಿಐಟಿ ಆವರಣದಲ್ಲಿ ಮೇಳದ ಸಿದ್ಧತೆಗಳನ್ನು ಬುಧವಾರ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಎರಡೂ ಜಿಲ್ಲೆಗಳ ಜಿಲ್ಲಾಡಳಿತ, ಕೌಶಲ ಅಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದೆ. ಐಟಿ-ಬಿಟಿ, ಆಟೊಮೊಬೈಲ್, ಮೆಕ್ಯಾನಿಕಲ್, ಮಾರ್ಕೆಟಿಂಗ್, ಸೇಲ್ಸ್ ಆ್ಯಂಡ್ ರಿಟೇಲ್, ಟೆಲಿಕಾಂ, ಬಿಪಿಒ, ಟೆಕ್ಸ್‌ಟೈಲ್‌, ಬ್ಯಾಂಕಿಂಗ್, ಫೈನಾನ್ಸ್, ವಿಮಾ ಕಂಪನಿ, ಆಸ್ಪತ್ರೆ, ಫಾರ್ಮಾಸಿಟಿಕಲ್, ಆರೋಗ್ಯ, ಮ್ಯಾನುಫ್ಯಾಕ್ಟರಿಂಗ್, ಟ್ರಾನ್ಸ್‌ಪೋರ್ಟ್‌, ಆತಿಥ್ಯ, ಹೋಂ ನರ್ಸಿಂಗ್, ಆಹಾರ ಸಂಸ್ಕರಣೆ, ಗಾರ್ಮೆಂಟ್ಸ್, ಸೆಕ್ಯೂರಿಟಿ ಮೊದಲಾದ ವಲಯಗಳ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ’ ಎಂದು ಮಾಹಿತಿ ನೀಡಿದರು.

ನೋಂದಣಿಗೆ ಅವಕಾಶ:‘ಎಸ್ಸೆಸ್ಸೆಲ್ಸಿ ಪಾಸ್ ಅಥವಾ ಫೇಲ್, ಪಿ.ಯು.ಸಿ., ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಎಂ.ಬಿ.ಎ., ಸ್ನಾತ್ತಕೋತ್ತರ ಪದವಿ ವಿದ್ಯಾರ್ಹತೆಯ ಮತ್ತು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಪಾಲ್ಗೊಳ್ಳಬಹುದು. ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಕಂಪನಿಗಳ ಅಗತ್ಯ ಆಧರಿಸಿ ವಿವಿಧ ಬಣ್ಣದ ಪ್ರವೇಶಪತ್ರಗಳನ್ನು ನೀಡಲಾಗುವುದು. ಅವುಗಳ ಆಧಾರದ ಮೇಲೆ ಉದ್ಯೋಗದಾತರು ಸಂದರ್ಶನ ನಡೆಸಿ ಆಯ್ಕೆ ಮಾಡಲಿದ್ದಾರೆ’ ಎಂದರು.

‘ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿನ ವಯೋಮಾನದವರು ಭಾಗವಹಿಸಬಹುದು. ನೋಂದಣಿಗೆ ಅನುಕೂಲವಾಗುವಂತೆ ವಿಶೇಷ ಜಾಲತಾಣ www.belagaviudyogamela.in ವಿನ್ಯಾಸಗೊಳಿಸಲಾಗಿದೆ. 7ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗ ಇನ್ನೂ ಕಾಲಾವಕಾಶವಿದೆ. ನೇರವಾಗಿ ಬಂದವರಿಗೂ ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: 9449702768 ಅಥವಾ 7892924199 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಸೌಲಭ್ಯ ಕಲ್ಪಿಸಲು ಸೂಚನೆ:

ಡಿಸಿಪಿ ಸೀಮಾ ಲಾಟ್ಕರ್, ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಜಿಲ್ಲಾ ಕೌಶಲ ಅಭಿವೃದ್ಧಿ ‌ಅಧಿಕಾರಿ ಡಿ.ವೈ. ಹೆಳವರ, ಡಾ.ಸಂಜೀವ, ಎಸ್‌ಜಿಬಿಐಟಿ ಪ್ರಾಚಾರ್ಯ ಡಾ.ಸಿದ್ರಾಮಪ್ಪ ಇಟ್ಟಿ, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ ಇದ್ದರು.

ಇದಕ್ಕೂ ಮುನ್ನ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ, ಸಾವಿರಾರು ಜನ ಬರುವುದರಿಂದ ಅವರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್ ಮೊದಲಾದ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT