ಶುಕ್ರವಾರ, ಏಪ್ರಿಲ್ 16, 2021
31 °C
ಸಂಗೊಳ್ಳಿರಾಯಣ್ಣ ಕಾಲೇಜಿನಲ್ಲಿ ಆಯೋಜನೆ

ಬೆಳಗಾವಿ: ಉದ್ಯೋಗ ಮೇಳ: 156 ಅಭ್ಯರ್ಥಿಗಳು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ರಾಣಿ ಚನ್ನಮ್ಮ  ವಿಶ್ವವಿದ್ಯಾಲಯ (ಆರ್‌ಸಿಯು)ದ ಉದ್ಯೋಗ ಕೋಶ ಘಟಕದಿಂದ ಗುರುವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 1,500 ಮಂದಿ ನೋಂದಾಯಿಸಿಕೊಂಡಿದ್ದರು. ವಿವಿಧ ಕಂಪನಿಗಳು 156 ಮಂದಿಯನ್ನು ಆಯ್ಕೆ ಮಾಡಿಕೊಂಡವು.

25 ಕಂಪನಿಗಳು ಸಂದರ್ಶನ ನಡೆಸಿದವು.

ಮೇಳ ಉದ್ಘಾಟಿಸಿದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ಪದವೀಧರರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಹೊಸ ಶಿಕ್ಷಣ ನೀತಿಯಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿವೆ’ ಎಂದರು.

ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕ ಗುರುಪಾದಯ್ಯ ಹಿರೇಮಠ, ‘ಕೋವಿಡ್–19 ಕಾರಣದಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಯೋಗ್ಯ ಅಭ್ಯರ್ಥಿಗಳಿಗೆ ಯೋಗ್ಯ ನೌಕರಿಗಳು ದೊರೆಯಬೇಕು ಎನ್ನುವುದು ನಮ್ಮ ಆಶಯ. ಹೀಗಾಗಿ, ಮೇಳ ಆಯೋಜಿಸುವ ಮೂಲಕ ಆಕಾಂಕ್ಷಿಗಳು– ಕಂಪನಿಗಳ ನಡುವೆ ಸೇತುವೆಯಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲರೂ ವೇತನವನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಆದರೆ, ವೇತನ ಪಡೆದುಕೊಳ್ಳಲು ಬೇಕಾದ ಅರ್ಹತೆಯನ್ನು ಗಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಅಭ್ಯರ್ಥಿಯ ಕೌಶಲಕ್ಕೆ ತಕ್ಕಂತೆ ಕಂಪನಿಗಳು ವೇತನ ನೀಡುತ್ತವೆ. ನೌಕರಿ ಗಿಟ್ಟಿಸಿಕೊಂಡವರು ಸಂಬಳ ಸಾಲದೆಂದು 2–3 ತಿಂಗಳುಗಳಲ್ಲೇ ಬಿಟ್ಟು ಬರಬಾರದು. ತಾಳ್ಮೆಯಿಂದ ಕಾರ್ಯನಿರ್ವಹಿಸಿದರೆ ಭವಿಷ್ಯ ಬದಲಾಗಬಹುದು’ ಎಂದು ಕಿವಿಮಾತು ಹೇಳಿದರು.

ಆರ್‌ಸಿಯು ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ, ‘ಸುಖ–ದುಃಖ ಯಾವಾಗಲೂ ಶಾಶ್ವತವಲ್ಲ. ಬದಲಾವಣೆ ಜಗದ ನಿಯಮ. ಒಳಿತಿಗಾಗಿ ಕಾಯಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಗೊಳ್ಳಿ ರಾಯಣ ಪ್ರಥಮ ದರ್ಜೆ ಘಟಕ ಕಾಲೇಜಿನ ಪ್ರಾಚಾರ್ಯ ಡಾ.ಎಂ. ಜಯಪ್ಪ, ‘ಕಾಲೇಜಿನಲ್ಲಿ ನಾವು ಕೇವಲ ವಿದ್ಯೆಯನ್ನು ಮಾತ್ರ ನೀಡುವುದಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚಿಂತಿಸಿ ಪರಿಹಾರ ಒದಗಿಸುತ್ತೇವೆ. ಅವರ ಸರ್ವತೋಮುಖ ಅಭಿವೃದ್ಧಿಗೆ ಸದಾ ಸಿದ್ಧವಾಗಿದ್ದೇವೆ’ ಎಂದು ತಿಳಿಸಿದರು.

ಸಹಾಯಕ ಉದ್ಯೋಗಾಧಿಕಾರಿ ಗದ್ದಪ್ಪ ಕೋರಸಗಾಂವ, ಮಹೇಶ ಮಾರವಾಡಕರ ಇದ್ದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉದ್ಯೋಗ ಕೋಶದ ಅಧಿಕಾರಿ ಡಾ.ಆರ್.ಎನ್. ಮನಗೋಳಿ ಸ್ವಾಗತಿಸಿದರು. ಸುಕನ್ಯಾ ಹಿರೇಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ.ಜ್ಯೋತಿ ಬಿರಾದರ ನಿರೂಪಿಸಿದರು. ಉಪಪ್ರಾರ್ಚಾಯ ಅನಿಲ ರಾಮದುರ್ಗ ವಂದಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು