ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ: ಪೊಲೀಸರೊಂದಿಗೆ ಯುವಕರ ಸಂಘರ್ಷ

Last Updated 17 ಡಿಸೆಂಬರ್ 2021, 14:37 IST
ಅಕ್ಷರ ಗಾತ್ರ

ಬೆಳಗಾವಿ: ‘ಯುವಜನರಿಗೆ ಉದ್ಯೋಗ ಕೊಡಬೇಕು. ಇಲ್ಲವೇ ತಿಂಗಳಿಗೆ ₹ 9ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು’ ಎಂದು ಆಗ್ರಹಿಸಿ ರಾಜ್ಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಶುಕ್ರವಾರ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದರು. ತಮ್ಮನ್ನು ತಡೆದ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು.

ಅಲಾರವಾಡ ಕ್ರಾಸ್‌ನಿಂದ ಪಾದಯಾತ್ರೆಯಲ್ಲಿ ಹಲಗಾ ಗ್ರಾಮದ ಕೆಳಸೇತುವೆ ಬಳಿ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ದಾಟಲು ಯತ್ನಿಸಿದರು. ಪೊಲೀಸರು ತಡೆದಾಗ ನೂಕು ನುಗ್ಗಲು, ತಳ್ಳಾಟ ಉಂಟಾಯಿತು. ಪ್ರತಿಭಟನಾಕಾರರು–ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು, ‘ಉದ್ಯೋಗ ಕೊಡಿ ಇಲ್ಲವೇ ಅಧಿಕಾರಿ ಬಿಡಿ’ ಎಂದು ಘೋಷಣೆ ಮೊಳಗಿಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವರನ್ನು ಪೊಲೀಸರು, ಸುವರ್ಣ ಗಾರ್ಡನ್‌ ಬಳಿಯ ಪ್ರತಿಭಟನಾ ವೇದಿಕೆಗೆ ಕಳುಹಿಸಿದರು.

ಇದಕ್ಕೂ ಮುನ್ನ ಅಲಾರವಾಡ ಕ್ರಾಸ್ ಬಳಿ ಪಾದಯಾತ್ರೆಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದ್ದಾರೆ. ಅಪಾರ ಸಂಖ್ಯೆಯ ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ನೆರವಾಗುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ನುಡಿದಂತೆ ನಡೆಯಲಿಲ್ಲ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಪದವೀಧರರೆಲ್ಲರೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವ ಸ್ಥಿತಿ ಎದುರಾಗಿದೆ. ಯಾರಿಗೂ ಈ ಸರ್ಕಾರದಿಂದ ನೆರವಾಗಿಲ್ಲ’ ಎಂದು ದೂರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ‘ನಿರುದ್ಯೋಗದ ಬಗ್ಗೆ ದೇಶ ಮತ್ತು ರಾಜ್ಯದಲ್ಲಿ ಹೋರಾಟ ಮಾಡಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಐತಿಹಾಸಿಕವಾಗಿದೆ’ ಎಂದರು.

‘ಸರ್ಕಾರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಹೋರಾಟ ನಡೆಸಿ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಜಾಗೃತಿ ಮೂಡಿಸಬೇಕು. ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಕೂಡ ಗುರುತಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ, ‘ಯುವ ಸಮೂಹಕ್ಕೆ ಉದ್ಯೋಗ ನೀಡದೆ ಸರ್ಕಾರ ವಂಚಿಸಿದೆ.‌ ಖಾಲಿ ಇರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಯುವ ನಾಯಕ ರಾಹುಲ್ ಜಾರಕಿಹೊಳಿ ಕಾರ್ಯಕರ್ತರೊಂದಿಗೆ ಕಾಕತಿಯಿಂದ ಪ್ರತಿಭಟನಾ ಸ್ಥಳಕ್ಕೆ ದ್ವಿಚಕ್ರವಾಹನ ರ‍್ಯಾಲಿ ಮೂಲಕ ಬಂದು ಸೇರಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌, ಮುಖಂಡರಾದ ಮೃಣಾಲ ಹೆಬ್ಬಾಳಕರ, ರೋಹಿಣಿ‌ ಪಾಟೀಲ, ದಿಲದಾರ್ ಮುಲ್ಲಾ, ರಾಜು ಸಿದ್ನಾಳ, ಅಯ್ಯದ್ ಅನ್ವರ್, ಸಿದ್ದಿಕಿ ಶಾನೂಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT