ಭಾನುವಾರ, ಜನವರಿ 24, 2021
28 °C

‘ಪತ್ರಕರ್ತರು ನಿರ್ಭೀತಿಯಿಂದ ವರದಿ ಮಾಡಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಸಮಾಜದ ಹಿತ ಕಾಪಾಡುವ ವಿಷಯಗಳ ಕುರಿತು ಪತ್ರಕರ್ತರು ನಿರ್ಭೀತಿಯಿಂದ ವರದಿ ನೀಡಬೇಕು. ಆಗ ಮಾತ್ರ ಒಳ್ಳೆಯ ಬೆಳವಣಿಗೆ ಆಗಲು ಸಾಧ್ಯ’ ಎಂದು ಸಾಹಿತಿ ಸರಜೂ ಕಾಟ್ಕರ್‌ ಹೇಳಿದರು.

ಇಲ್ಲಿನ ‘ಪತ್ರಕಾರ ವಿಕಾಸ ಆಕಾಡೆಮಿ’ಯು ಬುಧವಾರ ಹಮ್ಮಿಕೊಂಡಿದ್ದ ಮರಾಠಿ ಪತ್ರಿಕೋದ್ಯಮದ ಜನಕ ಬಾಳಶಾಸ್ತ್ರಿ ಜಾಂಬೆಕರ ಜಯಂತಿ ಮತ್ತು ಪತ್ರಕರ್ತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪತ್ರಕರ್ತರು ಅನೇಕ ಕಷ್ಟಗಳನ್ನು ಎದುರಿಸುತ್ತಾರೆ. ಎಂತಹ ಕಠಿಣ ಪರಿಸ್ಥಿತಿ ಬಂದರೂ ಪ್ರಾಮಾಣಿಕತೆಯಿಂದ ವರದಿ ಮಾಡಬೇಕು. ಯಾವುದೇ ಆಮಿಷ  ಅಥವಾ ಒತ್ತಡಕ್ಕೆ ಒಳಗಾಗದೆ ನಿಷ್ಠುರ ಮತ್ತು ನಿಖರವಾಗಿ ಕಾರ್ಯನಿರ್ವಹಿಸಬೇಕು. ಪತ್ರಿಕೋದ್ಯಮ ಪವಿತ್ರ ಮತ್ತು ಗೌರವದ ವೃತ್ತಿಯಾಗಿದೆ. ಪತ್ರಿಕೆಗಳಲ್ಲಿನ ವರದಿಗಳು ಸಮಾಜದ ಕನ್ನಡಿಯಂತಿರಬೇಕು. ಸಕಾರಾತ್ಮಕ ಬದಲಾವಣೆ ತರುವ ಶಕ್ತಿ ಪತ್ರಿಕೋದ್ಯಮಕ್ಕಿದೆ’ ಎಂದರು.

ಬಸವರಾಜ ಕಟ್ಟೀಮನಿ ಪತ್ರಿಕೋದ್ಯಮ ಪುರಸ್ಕಾರಕ್ಕೆ ಭಾಜನವಾದ ಕಾಟ್ಕರ್ ಹಾಗೂ ‍ಪತ್ರಕರ್ತ ದಿಲೀಪ ಕುರಂದವಾಡೆ ಅವರನ್ನು ಅಕಾಡೆಮಿಯಿಂದ ಸತ್ಕರಿಸಲಾಯಿತು. ‘ತರುಣ ಭಾರತ’ ಪತ್ರಿಕೆ ಸಂಪಾದಕ ಜಯವಂತ ಮಂತ್ರಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಪ್ರಶಾಂತ ಬರ್ಡೆ, ಡಿ.ಕೆ. ಪಾಟೀಲ, ಕುಂತಿನಾಥ ಕಲಮನಿ ಇದ್ದರು.

ಈಚೆಗೆ ನಿಧನರಾದ ಪತ್ರಕರ್ತರಾದ ಅಶೋಕ ಯಾಳಗಿ ಮತ್ತು ರಾಘವೇಂದ್ರ ಜೋಶಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಕಾಡೆಮಿ ಅಧ್ಯಕ್ಷ ಪ್ರಸಾದ ಪ್ರಭು ಪರಿಚಯಿಸಿದರು. ಸದಸ್ಯ ನೇತಾಜಿ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.