ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲುವ ಭೀತಿಯಿಂದ ಜಾತಿ ಹೆಸರಲ್ಲಿ ಮತಯಾಚನೆ: ಖಂಡ್ರೆ ಖಂಡನೆ

ಯಡಿಯೂರ‍ಪ್ಪ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಟೀಕೆ
Last Updated 3 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಮೋಳೆ (ಬೆಳಗಾವಿ ಜಿಲ್ಲೆ): ‘ಉಪ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಸೋಲಲಿದೆ. ಈ ಭೀತಿಯಿಂದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಟೀಕಿಸಿದರು.

ಮಂಗಳವಾರ ಉಗಾರದಲ್ಲಿ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರಮಗೌಡ (ರಾಜು) ಕಾಗೆ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

‘ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುವುದು ಅಪರಾಧ. ಅಲ್ಲದೇ, ಮಾದರಿ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಕೂಡ ವೀರಶೈವ ಸಮಾಜದ ಹೆಸರಿನಲ್ಲಿ ಹೇಳಿಕೆಗಳನ್ನು ಕೊಡುತ್ತಾ ಮತಯಾಚನೆ ಮಾಡಿದ್ದಾರೆ. ಸೋಲುವ ಭೀತಿಯಿಂದ ಬಿಜೆಪಿಯವರು ಹತಾಶರಾಗಿದ್ದಾರೆ’ ಎಂದು ದೂರಿದರು.

‘ರಾಜು ಕಾಗೆ ನಾಲ್ಕು ಬಾರಿ ಶಾಸಕರಾಗಿ ಅಭಿವೃದ್ಧಿ ಪರವಾದ ಕೆಲಸ ಮಾಡಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಿದ್ದಾರೆ. ತಮ್ಮ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ತೂಕದಲ್ಲಿ ಮೋಸ ಮಾಡಿದ್ದಾರೆ. ರೈತರಿಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ, ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ’ ಎಂದರು.

‘ಈ ಉಪ ಚುನಾವಣೆ ಧರ್ಮ-ಅಧರ್ಮ ಹಾಗೂ ಸತ್ಯ-ಅಸತ್ಯದ ಮಧ್ಯದ ಚುನಾವಣೆಯಾಗಿದೆ. ಇದರಲ್ಲಿ ಸತ್ಯಕ್ಕೆ ಜಯವಾಗಲಿದೆ. ಸರ್ಕಾರ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಗೆಲ್ಲಲು ಕುತಂತ್ರ ನಡೆಸಿದೆ. ಹಣದಿಂದ ಶಾಸಕರನ್ನು ಖರೀದಿಸಿರುವ ಬಿಜೆಪಿ ನಾಯಕರು ಹಣದಿಂದ ಮತದಾರರನ್ನು ಖರೀದಿಸುವ ಹಗಲುಗನಸು ಕಾಣುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ’ ಎಂದು ಹೇಳಿದರು.

‘ಯಡಿಯೂರಪ್ಪ ಮಾತ್ರವಲ್ಲ, ನಾನು, ರಾಜು ಕಾಗೆ, ಗಣೇಶ ಹುಕ್ಕೇರಿ, ಆನಂದ ನ್ಯಾಮಗೌಡ ಲಿಂಗಾಯತರಲ್ಲವೇ?’ ಎಂದು ಕೇಳಿದರು.

ಅಭ್ಯರ್ಥಿ ರಾಜು ಕಾಗೆ, ಶಾಸಕರಾದ ಗಣೇಶ ಹುಕ್ಕೇರಿ, ಆನಂದ ನ್ಯಾಮಗೌಡ, ಮುಖಂಡರಾದ ರೆಹಮಾನ್ ಖಾನ್, ಲಕ್ಷ್ಮಣರಾವ್ ಚಿಂಗಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT