ಬುಧವಾರ, ಮೇ 25, 2022
27 °C

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ: ಕಾಗವಾಡ ಬಂದ್‌ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಳೆ (ಬೆಳಗಾವಿ ಜಿಲ್ಲೆ): ‘ರಾಯಚೂರಿನಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೊಗೆ ಅವಮಾನ ಮಾಡಿದ ಆರೋಪ ಎದುರಿಸುತ್ತಿರುವ ಅಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿ ದಲಿತ ಸಂಘಟನೆಗಳಿಂದ ಶನಿವಾರ ಕರೆ ನೀಡಿದ್ದ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.

ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು. ವಕೀಲರ ಸಂಘದವರು ಬೆಂಬಲ ನೀಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಫೋಟೊದೊಂದಿಗೆ ಸಂಘಟನೆಗಳವರು ಮೆರವಣಿಗೆ ನಡೆಸಿದರು. ಮಲ್ಲಿಕಾರ್ಜುನ ಗೌಡ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ವಿಜಯಪುರ- ಕಾಗವಾಡ ರಸ್ತೆ ಮಾರ್ಗವಾಗಿ ಬಂದು ಚನ್ನಮ್ಮ ವೃತ್ತದಲ್ಲಿ ಸೇರಿ ಮಾನವ ಸರಪಳಿ ನಿರ್ಮಿಸಿದರು.

ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಸಂಜಯ ತಳವಲ್ಕರ್, ‘ನ್ಯಾಯದಾನ ಮಾಡಬೇಕಾದ ವ್ಯಕ್ತಿಯೇ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿರುವುದು ಖಂಡನೀಯ. ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವವರೆಗೆ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿ ಬಹುಜನರಿಗೆ ನೋವುಂಟು ಮಾಡಿದ್ದಾರೆ. ಅವರ ವಿರುದ್ಧ ದೇಶ ದ್ರೋಹದ ಮೇಲೆ ಗಡಿಪಾರು ಮಾಡಬೇಕು. ನ್ಯಾಯಾಧೀಶ ಸ್ಥಾನದಿಂದ ವಜಾಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಆ ನ್ಯಾಯಾಧೀಶರ ವಿರುದ್ಧ ಕೂಡಲೇ ಕ್ರಮ ವಹಿಸದಿದ್ದಲ್ಲಿ ಜಿಲ್ಲಾ ಬಂದ್‌ಗೆ ಕರೆ ನೀಡಬೇಕಾಗುತ್ತದೆ’ ಎಂದು ದಸಂಸ ಜಿಲ್ಲಾ ಸಂಚಾಲಕ ಶ್ರೀಕಾಂತ್ ತಳವಾರ ತಿಳಿಸಿದರು.

ತಹಶೀಲ್ದಾರ್‌ ರಾಜೇಶ ಬುರ್ಲಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಪ್ರಕಾಶ ದೊಂಡಾರೆ, ಬಾಳಾಸಾಬ ಕಾಂಬ್ಳೆ, ವಕೀಲರಾದ ಅಮಿತ ದಿಕ್ಷಾಂತ, ಶಿವಾಜಿ ಕಾಂಬ್ಳೆ, ಎಸ್.ಎಸ್. ನಿಡೋಣಿ, ಸುಭಾಷ್ ಡಾಲೆ, ಜ್ಯೋತಿಕುಮಾರ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು