ಶನಿವಾರ, ಏಪ್ರಿಲ್ 1, 2023
23 °C

ಕಲ್ಮಡ್ಡಿ ಏತ ನೀರಾವರಿ ಯೋಜನೆ: ಸೆಪ್ಟೆಂಬರ್‌ಗೆ ಕಾಮಗಾರಿ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ (ಬೆಳಗಾವಿ ಜಿಲ್ಲೆ): ‘ಕೌಜಲಗಿ ಮತ್ತು ಸುತ್ತಲಿನ ಹಳ್ಳಿಗಳ ಜಮೀನುಗಳಿಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಸೌಲಭ್ಯವು ಸೆಪ್ಟೆಂಬರ್‌ನಲ್ಲಿ ದೊರೆಯಲಿದೆ’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ತಳಕಟ್ನಾಳ ಗ್ರಾಮದ ಬಳಿ ಘಟಪ್ರಭಾ ನದಿಯಿಂದ ನೀರೆತ್ತಲು ನಿರ್ಮಿಸಲಾಗುತ್ತಿರುವ ಜಾಕ್‌ವೆಲ್ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ ಅವರು ಮಾತನಾಡಿದರು.

‘ರೈತರ ಬಹುದಿನಗಳ ಕನಸು ಇನ್ನು ಮೂರು ತಿಂಗಳೊಳಗೆ ನನಸಾಗಲಿದೆ. ಕಾಮಗಾರಿಯು ತ್ವರಿತವಾಗಿ ನಡೆಯುತ್ತದೆ’ ಎಂದು ತಿಳಿಸಿದರು.

‘ಸಣ್ಣ ನೀರಾವರಿ ಇಲಾಖೆಯಿಂದ ಕಲ್ಮಡ್ಡಿ ಏತ ನೀರಾವರಿಗೆ ₹ 161 ಕೋಟಿ ದೊರೆತಿದೆ. ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ 5,680 ಎಕರೆ ಕೃಷಿ ಭೂಮಿಗೆ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ ದೊರಕಲಿದೆ. ಈಗಾಗಲೇ ತಳಕಟ್ನಾಳ ಬಳಿ ಜಾಕ್‌ವೆಲ್ ಕಾಮಗಾರಿ ಪೂರ್ಣಗೊಂಡಿದ್ದು, ಪ್ಲಾಸ್ಟಿಂಗ್ ಕಾಮಗಾರಿ ಭರದಿಂದ ಸಾಗಿದೆ’ ಎಂದು ಹೇಳಿದರು.

‘ಹೋದ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಕಾಮಗಾರಿಗೆ ಸ್ವಲ್ಪ ಅಡಚಣೆಯಾಗಿದೆ’ ಎಂದರು.

‘ಇದೇ ನೀರಾವರಿ ಯೋಜನೆಯಲ್ಲಿ ಕೆರೆಗಳನ್ನೂ ತುಂಬಿಸಲಾಗುವುದು. ಅದರಲ್ಲಿ ಕಪರಟ್ಟಿ, ಖಂಡ್ರಟ್ಟಿ, ಕೌಜಲಗಿ ಮತ್ತು ಬಿಲಕುಂದಿ ಗ್ರಾಮಗಳಲ್ಲಿರುವ ಒಟ್ಟು 6 ಕೆರೆಗಳನ್ನು ಭರ್ತಿ ಮಾಡಲಾಗುವುದು’ ಎಂದು ತಿಳಿಸಿದರು.

‘ಕೌಜಲಗಿ, ಬಿಲಕುಂದಿ, ಗೋಸಬಾಳ, ಬಗರನಾಳ ಹಾಗೂ ಮನ್ನಿಕೇರಿ ಗ್ರಾಮಗಳ ರೈತರಿಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆ ದೊರೆಯಲಿದೆ. ಇದರಿಂದ ಈ ಭಾಗದ ಕೃಷಿಕರಲ್ಲಿ ಹೊಸ ಆಶಾಕಿರಣ ಮೂಡಲಿದೆ’ ಎಂದರು.

ಮುಖಂಡರಾದ ಲಕ್ಷ್ಮಣ ಮಸಗುಪ್ಪಿ, ವಿರೂಪಾಕ್ಷಿ ಮುಂಗರವಾಡಿ, ಲಕ್ಕಪ್ಪ ಹುಲಕುಂದ, ಕೆಂಪಣ್ಣ ಬೆಣ್ಣಿ, ಹಣಮಂತ ನಾಯಿಕ, ರೇವಣ್ಣ ವಡೇರ, ಹನಮಂತ ಅಜ್ಜನ್ನವರ, ಅಜ್ಜಪ್ಪ ಹುಲಕುಂದ, ರಾಮಣ್ಣ ಬಾಣಿ, ಬಸಪ್ಪ ಕಪರಟ್ಟಿ, ಸಣ್ಣ ನೀರಾವರಿ ಇಲಾಖೆಯ ಎಇಇ ಶ್ರೀಕಾಂತ ಮೆಳವಂಕಿ, ಜೆಇ ಜೈಭೀಮ, ಗುತ್ತಿಗೆದಾರ ಸುಧಾಕರ ಶೆಟ್ಟಿ, ನಾಗಪ್ಪ ಮಾದರ, ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು