ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಪ್ರಭಾವ; ಪ್ರಾದೇಶಿಕ ಭಾಷೆಗಳಿಗೆ ಆತಂಕ

ವಿಟಿಯು ಸಮಾರಂಭದಲ್ಲಿ ಮನು ಬಳಿಗಾರ ಕಳವಳ
Last Updated 22 ಆಗಸ್ಟ್ 2019, 11:59 IST
ಅಕ್ಷರ ಗಾತ್ರ

ಬೆಳಗಾವಿ: ‘ಇಂಗ್ಲಿಷ್‌ ಪ್ರಭಾವದಿಂದಾಗಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಆತಂಕ ಎದುರಾಗಿದೆ. ಹೀಗಾಗಿ, ನಮ್ಮ ಭಾಷೆ ಉಳಿಯಬೇಕಾದರೆ ಅದನ್ನು ಹೆಚ್ಚಾಗಿ ಬಳಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ ಹೇಳಿದರು.

ಇಲ್ಲಿನ ವಿಟಿಯುನಲ್ಲಿ ಗುರುವಾರ ನಡೆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ, ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆಯ 3ನೇ ಸರಣಿಯ 9 ಕನ್ನಡ ಪುಸ್ತಕಗಳ ಬಿಡುಗಡೆ ಮತ್ತು ವಿಟಿಯು‌ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವದ ಬಹುತೇಕ ಕಡೆಗಳಲ್ಲಿ ಇಂಗ್ಲಿಷ್ ವ್ಯಾಪಿಸಿದೆ. ಜನರು ಅದನ್ನು ಬಿಡದೇ ಇರುವುದೇ ಅದಕ್ಕೆ ಕಾರಣ. ಕನ್ನಡದ ಮೂಲಕವೇ ಇಂಗ್ಲಿಷ್ ವಿರುದ್ಧ ಹೋರಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ತಮಿಳರು ಹಾಗೂ ಬಂಗಾಳಿಗಳು ಮಾದರಿಯಾಗಬೇಕು. ಬೇರೆ ಭಾಷೆಗಳನ್ನು ಕಲಿಯಬೇಕು ನಿಜ. ಆದರೆ, ನಮ್ಮ ಭಾಷೆ ಮಾತಾಡುತ್ತಾ ಉಳಿಸಿಕೊಂಡು ಹೋಗಬೇಕು’ ಎಂದು ತಿಳಿಸಿದರು.

ವಿಟಿಯು ಕ್ರಮ ಅಭಿನಂದನಾರ್ಹ

‘ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕನ್ನಡದ ಕೆಲಸ ಚೆನ್ನಾಗಿ ನಡೆಯುತ್ತಿರುವುದು ಅಭಿನಂದನಾರ್ಹ. ಅಮೂಲ್ಯ ಗ್ರಂಥಗಳನ್ನು ಹೊರತರುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ದೊಡ್ಡದು. ಕಸಾಪ ಅಧ್ಯಕ್ಷನಾಗಿ ಹಲವು ಪ್ರಥಮಗಳನ್ನು ನಾನು ಮಾಡಿದ್ದೇನೆ. ಆದರೆ, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಅವರು ನನಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ’ ಎಂದರು.

‘ವ್ಯವಸ್ಥೆಯಲ್ಲಿ ಎಲ್ಲವೂ ಕೆಟ್ಟಿಲ್ಲ. ದೊಡ್ಡ ಹುದ್ದೆಗಳನ್ನು ‌ಒಲ್ಲೆ ಎನ್ನುವವರೂ ಇದ್ದಾರೆ. ಅವರವರ ಊರಿನಲ್ಲೇ ಇದ್ದುಕೊಂಡು ಕನ್ನಡ ಭಾಷೆ ಉಳಿವಿಗೆ ಹೋರಾಡುತ್ತಿದ್ದಾರೆ. ಜಾತಿ, ಹಣದಿಂದಷ್ಟೇ ಕೆಲಸ ಆಗುತ್ತದೆ ಎಂದು ಭಾವಿಸಬಾರದು. ಎಲ್ಲರೊಂದಿಗೆ ನಾವೂ ಕೊಳೆತು‌ ಹೋಗಬಾರದು. ದೊಡ್ಡ ಸಾಧನೆ ಮಾಡಬೇಕು ಎನ್ನುವ ಗುರಿಯನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕು. ಇದಕ್ಕೆ ಕಠಿಣ ಶ್ರಮ ಅತ್ಯಗತ್ಯ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಓದಿ

ಅಧ್ಯಕ್ಷತೆ ವಹಿಸಿದ್ದ ಡಾ.ಕರಿಸಿದ್ದಪ್ಪ ಮಾತನಾಡಿ, ‘ಜ್ಞಾನ ವೃದ್ಧಿಗಾಗಿ ಹಲವು ಭಾಷೆಗಳನ್ನು ಕಲಿಯಬೇಕು. ಮಾತೃಭಾಷೆ ಹೃದಯದ ಭಾಷೆ. ಅದರಲ್ಲಿ ಕಲಿತದ್ದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. ದೊಡ್ಡ ಸಾಧಕರೆಲ್ಲರೂ ಮಾತೃ ಭಾಷೆಯಲ್ಲಿ ಓದಿದವರೇ. ಹೀಗಾಗಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೂಡ ಕನ್ನಡ ಸಾಹಿತ್ಯ ಓದಬೇಕು’ ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ಕೆ. ಜೋರಾಪುರ, ‘ಸಾಹಿತಿಗಳಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ’ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಟಿಯು ಸಿಬ್ಬಂದಿಯ 27 ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರ ನಗದು ಒಳಗೊಂಡ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪುಸ್ತಕಗಳ ಲೇಖಕರನ್ನು ಸತ್ಕರಿಸಲಾಯಿತು.

ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಲೈಸನ್ ಅಧಿಕಾರಿ ಡಾ.ಪ್ರಹ್ಲಾದ ಪಿ. ರಾಠೋಡ ಇದ್ದರು ಪ್ರಸಾರಾಂಗ ನಿರ್ದೇಶಕ ಡಾ.ಎಂ.ಎನ್. ಬಿರ್ಜೆ ಸ್ವಾಗತಿಸಿದರು. ಕನ್ನಡ ಪುಸ್ತಕ ಪ್ರಕಟಣಾ ಸಮಿತಿ ಅಧ್ಯಕ್ಷ ಸಿ.ಕೆ. ಸುಬ್ಬರಾಯ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾರಾಂಗ ಸಂಯೋಜಕಿ ಶಾಂತಾ ಮಲ್ಲಿಕಾರ್ಜುನ ಕೋರಾಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT