ಮಂಗಳವಾರ, ಜನವರಿ 19, 2021
27 °C
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸರ್ವಾಧ್ಯಕ್ಷತೆ

ಕಾಗವಾಡದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಾಗವಾಡ ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯ ಆವರಣದಲ್ಲಿ ಜ. 30 ಹಾಗೂ 31ರಂದು ಆಯೋಜಿಸಲಾಗಿದೆ’ ಎಂದು ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತಿಳಿಸಿದರು.

‘ಸರ್ವಾಧ್ಯಕ್ಷರನ್ನಾಗಿ ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಧಾನ ವೇದಿಕೆಗೆ ಮಿರ್ಜಿ ಅಣ್ಣಾರಾಯ ಮತ್ತು ಮುಖ್ಯಮಂಟಪಕ್ಕೆ ಅಥಣಿ ಮೋಟಗಿ ಮಠದ ಗುರುಬಸವ ಸ್ವಾಮೀಜಿ ಹೆಸರಿಡಲಾಗಿದೆ. ಗಡಿಯಲ್ಲಿ ಕನ್ನಡದ ಪ್ರಜ್ಞೆ ಜಾಗೃತಗೊಳಿಸಲು ಮತ್ತು ಸಮ್ಮೇಳನದ ಯಶಸ್ಸಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, 12 ಉಪ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಮನು ಬಳಿಗಾರ ಅವರಿಂದ ಉದ್ಘಾಟನೆ: ‘30ರಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ನೆರವೇರಲಿದೆ. ಬೆಳಿಗ್ಗೆ 9ಕ್ಕೆ ಮೆರವಣಿಗೆಯನ್ನು ತಾ.ಪಂ. ಅಧ್ಯಕ್ಷೆ ಕೃಷ್ಣಬಾಯಿ ನಂದಾಳೆ ಮತ್ತು ಉಪಾಧ್ಯಕ್ಷೆ ಶೋಭಾ ಬಂಡಗರ ಉದ್ಘಾಟಿಸುವರು. ಗ್ರಾಮ ಪಂಚಾಯ್ತಿಯಿಂದ ಹನುಮಾನ ಮಂದಿರ, ಚನ್ನಮ್ಮ ವೃತ್ತದ ಮೂಲಕ ಮೆರವಣಿಗೆ ಸಾಗಲಿದೆ. ಬೆಳಿಗ್ಗೆ 11ಕ್ಕೆ ಸಮ್ಮೇಳನವನ್ನು ಕಸಾಪ ಅಧ್ಯಕ್ಷ ಮನು ಬಳಿಗಾರ ಉದ್ಘಾಟಿಸುವರು. ಜವಳಿ ಸಚಿವ ಶ್ರೀಮಂತ ಪಾಟೀಲ ಅಧ್ಯಕ್ಷತೆ ವಹಿಸುವರು. ಮಲ್ಲಿಕಾರ್ಜುನ ಗುರುದೇವಾಶ್ರಮದ ಬಸವಲಿಂಗ ಸ್ವಾಮೀಜಿ, ಮಹಾಂತ ದುರದುಂಡೀಶ್ವರ ಮಠದ ನೀಲಕಂಠೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ತಿಳಿಸಿದರು.

‘ಪುಸ್ತಕ ಮಳಿಗೆ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಮ್ಮೇಳನ ಸಂಚಿಕೆ ಹಾಗೂ ಪುಸ್ತಕಗಳನ್ನು ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಈರಣ್ಣ ಕಡಾಡಿ ಬಿಡುಗಡೆ ಮಾಡುವರು. ಜನಪ್ರತಿನಿಧಿಗಳು, ಸಾಹಿತಿಗಳು ಮುಖ್ಯಅತಿಥಿಗಳಾಗಿ ಭಾಗವಹಿಸುವರು. ನಿಕಟಪೂರ್ವ ಅಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡುವರು’ ಎಂದರು.

ಗಡಿ ನಾಡ ಚಿಂತನೆ: ‘ಮಧ್ಯಾಹ್ನ 2ರಿಂದ ‘ಗಡಿ ನಾಡ ಚಿಂತನೆ’ ಗೋಷ್ಠಿ ನಡೆಯಲಿದೆ. ಅಂಜುಮನ್ ಕಾಲೇಜಿನ ‍ಪ್ರಾಚಾರ್ಯ ಡಾ.ಎಚ್‌.ಐ. ತಿಮ್ಮಾಪುರ ಅಧ್ಯಕ್ಷತೆ ಮತ್ತು ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ‘ಕನ್ನಡ–ಮರಾಠಿ ಭಾಷಾ ಬಾಂಧವ್ಯ’ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಎ.ಜಿ. ಘಾಟಗೆ ಮತ್ತು  ‘ಗಡಿ ಭಾಗದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ’ ಕುರಿತು ಸಾಹಿತಿ ಡಾ.ಸಂತೋಷ ಹಾನಗಲ್ ಮಾತನಾಡುವರು. ಸಂಜೆ 4ಕ್ಕೆ ನಡೆಯುವ 2ನೇ ಗೋಷ್ಠಿ ‘ಸಮಕಾಲೀನ ಚಿಂತನ’ದಲ್ಲಿ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸುವರು. ‘ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಸಾಹಿತ್ಯ’ ಕುರಿತು ಪ್ರಾಧ್ಯಾಪಕ ಡಾ.ಎಚ್.ಬಿ. ಕೋಲಕಾರ ಮತ್ತು ‘ಸಮಗ್ರ ಕೃಷಿ ಅಭಿವೃದ್ಧಿ ಚಿಂತನ’ ಬಗ್ಗೆ ಡಾ.ಅಶೋಕ ಪಾಟೀಲ ಮಾತನಾಡುವರು. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಕಾವ್ಯವಾಚನ, ಸನ್ಮಾನ: ‘31ರಂದು ಬೆಳಿಗ್ಗೆ 9ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿಸ ಸದಸ್ಯ ಡಾ.ಬಾಳಾಸಾಹೇಬ ಲೋಕಾಪೂರ ಅಧ್ಯಕ್ಷತೆ ವಹಿಸುವರು. 36 ಮಂದಿ ಹಿರಿ–ಕಿರಿಯ ಕವಿಗಳು ಕಾವ್ಯ ವಾಚಿಸುವರು. ಮಧ್ಯಾಹ್ನ 12ಕ್ಕೆ ಮಹಿಳಾ ಗೋಷ್ಠಿ ನಡೆಯಲಿದ್ದು, ಸಾಹಿತಿ ಲೀಲಾದೇವಿ ಆರ್. ಪ್ರಸಾದ್ ಅಧ್ಯಕ್ಷತೆ ವಹಿಸುವರು. ಪದ್ಮಿನಿ ನಾಗರಾಜ, ಭಾರತಿ ಬಿಜಾಪುರ ಮತ್ತು ಡಾ.ನಿರ್ಮಲಾ ಯಲಿಗಾರ ಉಪನ್ಯಾಸ ನೀಡುವರು. ಮಧ್ಯಾಹ್ನ 2ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಇರಲಿದೆ. ಸಂಜೆ 4ಕ್ಕೆ ವಿವಿಧ ಕ್ಷೇತ್ರದ 24 ಸಾಧಕರನ್ನು ಸತ್ಕರಿಸಲಾಗುವುದು. ಸಂಜೆ 5ಕ್ಕೆ ಬಹಿರಂಗ ಅಧಿವೇಶನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ನಿರ್ಣಯಗಳನ್ನು ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ಸಾಧಕರ ಹೆಸರು: ‘ಮಹಾದ್ವಾರಗಳಿಗೆ ಸಾಧಕರಾದ ಭುಜೇಂದ್ರ ಮಹಿಷವಾಡಗಿ, ಬುದ್ಧಣ್ಣ ಹಿಂಗಮಿರೆ, ಲೀಲಾವತಿ ತೋರಣಗಟ್ಟಿ, ಸಿದ್ದನಗೌಡ ಪಾಟೀಲ, ಅಲಗೌಡ ಕಾಗೆ, ಸಿದಗೌಡ ಗುರುಸಿದ್ದಗೌಡ ಕಾಗೆ, ಸವದಿ ಮಲ್ಲಯ್ಯ, ಮನೋಹರರಾವ ದೇಶಪಾಂಡೆ, ರಾಘವೇಂದ್ರ ಜೋಶಿ, ಡಾ.ಎಂ.ಬಿ. ನೇಗಿನಹಾಳ, ಅನಂತರಾವ ಭೋಸಗೆ, ಬಸವರಾಜ ಸಸಾಲಟ್ಟಿ, ನುಡಿ ಮಾರ್ಗಕ್ಕೆ ಕಾಶಿನಾಥ ಶಿವರುದ್ರ ಕಾಂಬಳೆ, ದಾಸೋಹ ಮಂಟಪಕ್ಕೆ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಪುಸ್ತಕ ಮಳಿಗೆಗೆ ರಂ.ಶಾ. ಲೋಕಾಪುರ ಅವರ ಹೆಸರಿಡಲಾಗಿದೆ’ ಎಂದು ಮಂಗಲಾ ವಿವರಿಸಿದರು.

ಗೌರವ ಕಾರ್ಯದರ್ಶಿ ಜ್ಯೋತಿ ಬದಾಮಿ ಹಾಗೂ ಗೌರವ ಕೋಶಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಇದ್ದರು.

***

ಬೆಳಗಾವಿ ಮಹಾನಗರಪಾಲಿಕೆ ಮುಂಭಾಗ ಹಾರಿಸಿರುವ ಕನ್ನಡ ಧ್ವಜವನ್ನು ತೆರವುಗೊಳಿಸಬಾರದು. ಕನ್ನಡದ ಕೆಲಸಕ್ಕೆ ಕಸಾಪ ಸದಾ ಬೆಂಬಲವಾಗಿ ನಿಲ್ಲಲಿದೆ.
–ಮಂಗಲಾ ಮೆಟಗುಡ್ಡ, ಅಧ್ಯಕ್ಷರು, ಜಿಲ್ಲಾ ಘಟಕ, ಕಸಾಪ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು