ಬುಧವಾರ, ಆಗಸ್ಟ್ 10, 2022
24 °C

ಕನ್ನಡ ಬಾವುಟಕ್ಕೆ ಬೆಂಕಿ: ಮೂವರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಲಸಿಯಲ್ಲಿ ಕನ್ನಡ ಬಾವುಟ ಸುಟ್ಟ ಮತ್ತು ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸೆಗಣಿ ಮೆತ್ತಿದ್ದ ಪ್ರಕರಣದ ಸಂಬಂಧ ನಂದಗಡ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

ಅದೇ ಗ್ರಾಮದ ಸಂಜು ಗುರವ, ಸಚಿನ ಗುರವ ಹಾಗೂ ಗಣೇಶ ಪೆಡ್ನೇಕರ ಬಂಧಿತರು. 

ಪ್ರತಿಭಟನೆ: ಬಸವೇಶ್ವರರ ಚಿತ್ರಕ್ಕೆ ಅಪಮಾನ ಖಂಡಿಸಿ, ಜಾಗತಿಕ ಲಿಂಗಾಯತ ಮಹಾಸಭಾದವರು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಮಹಾಪುರುಷರ ಪ್ರತಿಮೆಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿದರು. ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಭಾಗವಹಿಸಿದ್ದರು.

ಕರ್ನಾಟಕದ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ: ನೆರೆಯ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು, ಕರ್ನಾಟಕ ನೋಂದಣಿಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುವುದನ್ನು ಮುಂದುವರಿಸಿದ್ದಾರೆ. ಮೀರಜ್‌ನಲ್ಲಿ ಗೋಕಾಕ ಮೂಲದ ಟ್ಯಾಕ್ಸಿಗೆ  ಕಲ್ಲೆಸೆದು ಹಿಂಬದಿ ಗಾಜು ಒಡೆದು ಹಾಕಿದ್ದಾರೆ.  

‘ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು’
ಇಲ್ಲಿನ ಅನಗೋಳದ ಕನಕದಾಸ ಕಾಲೊನಿಯಲ್ಲಿ ಮರುಪ್ರತಿಷ್ಠಾಪಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಂಗಳವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು, ‘ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಅಪಮಾನ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಹಾಗೂ ಗಡಿಪಾರಿಗೆ ಚಿಂತನೆ ನಡೆದಿದೆ‘ ಎಂದರು.

*
ಗಡಿ ಪ್ರದೇಶದಲ್ಲಿ ಕನ್ನಡಿಗರು-ಮರಾಠಿಗರು ಹಿತ ಕಾಪಾಡುವ ಕ್ರಮವಾಗಿ ಮಹಾರಾಷ್ಟ್ರದ ಗೃಹ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ

*
ಎಂಇಎಸ್‌ ವಿರುದ್ಧ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಾಡಿದ್ದೇವೆ. ಈ ವಿಷಯವನ್ನು ಪ್ರಧಾನಿ ಅವರ ಗಮನಕ್ಕೂ ತರಲಾಗುವುದು
-ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

*
ಎಂಇಎಸ್ ಸೇರಿ ಯಾವುದೇ ಸಂಘಟನೆಯ ಗೂಂಡಾಗಿರಿ ವರ್ತನೆ ಸಹಿಸಿಕೊಳ್ಳಬಾರದು. ಅಂಥವರನ್ನು ಗಡಿಪಾರು ಮಾಡಿ ಕಠಿಣ ನಿರ್ಧಾರ ಕೈಗೊಳ್ಳಬೇಕು.
-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು