ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಮೇಲೆ ಇತರ ಭಾಷೆಗಳ ಪ್ರಭಾವ ಹೆಚ್ಚಳ

ಅಥಣಿಯಲ್ಲಿ ಕರ್ನಾಟಕ ರಾಜ್ಯೋತ್ಸವ
Last Updated 1 ನವೆಂಬರ್ 2019, 15:19 IST
ಅಕ್ಷರ ಗಾತ್ರ

ಅಥಣಿ: ‘ಕನ್ನಡ ಭಾಷೆ ಮೇಲೆ ಬೇರೆ ಭಾಷೆಗಳು ಪ್ರಭಾವ ಬೀರುತ್ತಿವೆ. ಇದರಿಂದಾಗಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದೇವೆ’ ಎಂದು ಇಲ್ಲಿನ ಬಣಜವಾಡ ಕಾಲೇಜಿನ ಪ್ರಾಚಾರ್ಯ ಬಸವರಾಜ ಗುರಕಿ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕು ಆಡಳಿತದಿಂದ ಶುಕ್ರವಾರ ಇಲ್ಲಿನ ಭೋಜರಾಜ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಯುವಪೀಳಿಗೆಯಲ್ಲಿ ಸಾಹಿತ್ಯ ಓದುವ ಅಭಿರುಚಿ ಕುಸಿಯುತ್ತಿದೆ. ಮೊಬೈಲ್‌ ಫೋನ್‌ಗೆ ದಾಸರಾಗಿರುವುದು ಇದಕ್ಕೆ ಕಾರಣ. ಮೊಬೈಲ್‌ ಫೋನ್‌ ತಲೆ ತಗ್ಗಿಸಿದರೆ, ಪುಸ್ತಕವು ತಲೆ ಎತ್ತುವಂತೆ ಮಾಡುತ್ತದೆ. ಹೀಗಾಗಿ, ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ’ ಎಂದು ತಿಳಿಸಿದರು.

‘ಗಡಿ ಭಾಗದಲ್ಲಿ ಕನ್ನಡ ಇನ್ನೂ ಗಟ್ಟಿಯಾಗಬೇಕು. ಬೇರೆ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಮಾತೃ ಭಾಷೆಯನ್ನು ಪ್ರೀತಿಸಬೇಕು. ಅದು ನಮ್ಮ ಉಸಿರಾಗಬೇಕು. ಸರ್ಕಾರವು ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಮಹಾಂತೇಶ ಉಕಲಿ, ‘ಉತ್ತರ ಕರ್ನಾಟಕದ ಜನರು ನೆರೆಯಿಂದ ತತ್ತರಿಸಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಈ ಸಮಸ್ಯೆ ಪ್ರತಿ ವರ್ಷ ಕಂಡುಬರುತ್ತಿದೆ. ಹೀಗಾಗಿ, ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ‘ಕನ್ನಡಿಗರು ಸ್ವಾಭಿಮಾನದಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಿದರೆ ಕೆಲವು ಪುಂಡರು ಭಾಷಾ ವೈಷಮ್ಯ ಬೆಳೆಸುತ್ತಿದ್ದಾರೆ. ಕರಾಳ ದಿನ ಆಚರಿಸುವ ಎಂಇಎಸ್‌ನವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲವಾದರೆ ಕನ್ನಡಗರು ಅವರಿಗೆ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್‌ ಎಂ.ಎನ್. ಬಳಿಗಾರ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಜ್ಯೋತಿ ಆನಂದ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಎಂ.ಬಿ. ಮೊರಟಗಿ, ಡಿವೈಎಸ್ಪಿ ಎ.ಎಸ್. ಗಿರೀಶ, ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ ಧರಿಗೌಡರ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಪಿಎಸ್‌ಐ ಉಸ್ಮಾನ ಅವಟಿ ಇದ್ದರು.

ತಾಲ್ಲೂಕು ಪಂಚಾಯ್ತಿ ಇಒ ರವಿ ಬಂಗಾರೆಪ್ಪನವರ ಸ್ವಾಗತಿಸಿದರು. ವಾಮನ ಕುಲಕರ್ಣಿ ನಿರೂಪಿಸಿದರು. ಬಿ.ಎಸ್. ಯಾದವಾಡ ವಂದಿಸಿದರು.

ಬಹುತೇಕ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗೈರುಹಾಜರಾಗಿದ್ದಕ್ಕೆ ಕನ್ನಡಪರ ಸಂಘಟನೆಗಳ ಮುಖಂಡ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ತಹಶೀಲ್ದಾರರನ್ನು ಒತ್ತಾಯಿಸಿದರು.

ನೆರೆ ಕಾರಣದಿಂದಾಗಿ ಮೆರವಣಿಗೆ ನಡೆಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT