ಕನ್ನಡ ಶಾಲೆಗಳಲ್ಲಿ ಮೂಲಸೌಲಭ್ಯ ಹೆಚ್ಚಲಿ: ಸಂಸದ ಸುರೇಶ ಅಂಗಡಿ ಅಭಿಮತ

7
ವಿಚಾರ ಸಂಕಿರಣದಲ್ಲಿ

ಕನ್ನಡ ಶಾಲೆಗಳಲ್ಲಿ ಮೂಲಸೌಲಭ್ಯ ಹೆಚ್ಚಲಿ: ಸಂಸದ ಸುರೇಶ ಅಂಗಡಿ ಅಭಿಮತ

Published:
Updated:
Deccan Herald

ಬೆಳಗಾವಿ: ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರ ಕಡಿಮೆಯಾಗಬೇಕು. ಸರ್ಕಾರವು ಕನ್ನಡ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದಿಂದ ಭಾನುವಾರ ಆಯೋಜಿಸಿದ್ದ ‘ಕನ್ನಡ ಶಾಲೆಗಳ ಅಳಿವು-ಉಳಿವು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಖ್ಯಾತಿ ಗಳಿಸಿದ್ದಾರೆ. ಸರ್ಕಾರಿ ಶಾಲೆಗಳಿಗಿರುವ ಗೌರವ ಅಪಾರ. ಸ್ವಾಭಿಮಾನದ ಕೊರತೆಯಿಂದ ಅನೇಕರು ಮಾತೃಭಾಷೆಯ ಬಗ್ಗೆ ತಾತ್ಸಾರ ಭಾವ ಹೊಂದುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆತಿದೆ. ಜ್ಞಾನಪೀಠ ಪುರಸ್ಕೃತರಲ್ಲಿ ಕನ್ನಡದ ಸಾಹಿತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಶ್ರೇಷ್ಠ ಭಾಷೆಯಾಗಿದೆ’ ಎಂದರು.

ಬೆಳೆಸಬೇಕು:

‘ಕೇಂದ್ರ ಸರ್ಕಾರವು ಮಹಾಮಾನವತಾವಾದಿ ಬಸವಣ್ಣನವರ ವಚನಗಳನ್ನು 23 ಭಾಷೆಗಳಲ್ಲಿ ಡಿಜಿಟಲೀಕರಣಗೊಳಿಸಿ ಪ್ರಕಟಿಸಿರುವುದು ಶ್ಲಾಘನೀಯ. ಮಾರ್ಕೆಟಿಂಗ್ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ’ ಎಂದು ತಿಳಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, ‘ಕನ್ನಡವನ್ನು ಕನ್ನಡಿಗರಿಂದಲೇ ಕಾಪಾಡಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಬೇರೆ ಭಾಷೆಯನ್ನು ಗೌರವಿಸಬೇಕು. ಜೊತೆಗೆ ನಮ್ಮ ಭಾಷೆಯನ್ನು ಮರೆಯಬಾರದು’ ಎಂದು ಹೇಳಿದರು.

‘ಕನ್ನಡ ಶಾಲೆಗಳು ಶಿಕ್ಷಣ ಮುಖಿಯಾಗಿರುವ ಜೊತೆಗೆ ಸಾಂಸ್ಕೃತಿಕ ಮುಖಿಗಳಾಗಿವೆ. ಕನ್ನಡ ಶಾಲೆಗಳು ಸಾಂಸ್ಕೃತಿಕ ಮತ್ತು ಭಾಷಿಕ ರಾಯಭಾರಿಗಳಾಗಿವೆ. ಇಂದು ಯಾವುದೇ ವಿಚಾರ ಪ್ರಚುರಪಡಿಸಲು ತಂತ್ರಜ್ಞಾನ ಪ್ರಮುಖ ಸಾಧನಾಗಿದೆ. ವಿವಿಧ ತಂತ್ರಾಂಶ ಸಿದ್ಧಪಡಿಸಿ, ತಂತ್ರಜ್ಞಾನದ ಮೂಲಕ ಕನ್ನಡ ಭಾಷೆಯನ್ನು ಎಲ್ಲೆಡೆ ಪಸರಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ವ್ಯವಸ್ಥೆ ರಾಷ್ಟ್ರೀಕರಣಗೊಳ್ಳಲಿ:

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಸ್.ಎಂ. ಗಂಗಾಧರಯ್ಯ ಮಾತನಾಡಿ, ‘ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಸಂಕಷ್ಟ ಎದುರಾಗಿದೆ. ಸರ್ಕಾರದ ಶಿಕ್ಷಣ ನೀತಿ, ನಿಯಮ ಹಾಗೂ ಪಾಲಕರ ಇಂಗ್ಲಿಷ್ ವ್ಯಾಮೋಹ ಇದಕ್ಕೆ ಕಾರಣವಾಗಿದೆ. ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಗೊಳಿಸಿದರೆ ಮಾತ್ರ ಪ್ರಾದೇಶಿಕ ಭಾಷೆಗಳು ಉಳಿಯುತ್ತವೆ’ ಎಂದು ಪ್ರತಿಪಾದಿಸಿದರು.

ಸಾನ್ನಿಧ್ಯ ವಹಿಸಿದ್ದ ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಮೂಲಸೌಕರ್ಯ ಕೊರತೆ, ಶಿಕ್ಷಕರ ನೇಮಕಾತಿಯಲ್ಲಿ ವಿಳಂಬ, ಪರಿಣಿತ ಶಿಕ್ಷಕರ ಕೊರತೆ, ಸ್ಪರ್ಧಾತ್ಮಕ ಮನೋಭಾವ ಇಲ್ಲದಿರುವುದು ಸರ್ಕಾರಿ ಶಾಲೆಗಳ ಹಿನ್ನೆಡೆಗೆ ಕಾರಣವಾಗಿವೆ’ ಎಂದು ವಿಶ್ಲೇಷಿಸಿದರು.

ಲೇಖಕ ಶ್ರೀಕಾಂತ ಶಾನವಾಡ ಮಾತನಾಡಿ, ‘ಸರ್ಕಾರದ ಲಾಭಕೋರತನಕ್ಕೆ ಸರ್ಕಾರಿ ಶಾಲೆಗಳು ಬಲಿಯಾಗುತ್ತಿವೆ. ಕನ್ನಡ ನೆಲದಲ್ಲೇ ಕನ್ನಡ ಭಾಷೆ ಅಳಿವು ಉಳಿವು ಎಂಬ ಕಾರ್ಯಕ್ರಮ ಮಾಡುವಂತಹ ಸ್ಥಿತಿ ಬಂದಿರುವುದು ದುರ್ದೈವ’ ಎಂದು ವಿಷಾದಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಅಧ್ಯಕ್ಷತೆ ವಹಿಸಿದ್ದರು. ಸೇವಾ ನಿವೃತ್ತಿ ಹೊಂದಿದ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಉಪಾಧ್ಯಕ್ಷ ಹಾಗೂ ಪ್ರಾಚಾರ್ಯ ವಿ.ಬಿ. ದೊಡಮನಿ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿಗಳಾದ ಜಿ.ಎಸ್. ಸೋನಾರ, ಪ್ರೊ.ವಿಜಯಲಕ್ಷ್ಮಿ ಪುಟ್ಟಿ, ಶಿ.ಗು. ಕುಸುಗಲ್ಲ, ಪ್ರಕಾಶ ಪಾಟೀಲ, ರವೀಂದ್ರ ತೋಟಗೇರ ಇದ್ದರು.

ಪ್ರತಿಷ್ಠಾನದ ಸಂಚಾಲಕ ರುದ್ರಣ್ಣ ಚಂದರಗಿ ಸ್ವಾಗತಿಸಿದರು. ಸಿ.ಜಿ. ಮಠಪತಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !