ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿ ಶಿಕ್ಷಕನಿಂದ ಕನ್ನಡ ಗೀತಗಾಯನ- ದನಿಗೂಡಿಸಲಿವೆ ಸಾವಿರಾರು ಕಂಠಗಳು

Last Updated 27 ಅಕ್ಟೋಬರ್ 2021, 12:46 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಅ.28ರಂದು ಆಯೋಜಿಸಲಾಗಿರುವ ‘ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ’ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಸಾವಿರಾರು ಕಂಠಗಳು ದನಿಗೂಡಿಸಲಿವೆ.

ಭಾಗವಹಿಸಲಿರುವ 2ಸಾವಿರ ವಿದ್ಯಾರ್ಥಿಗಳಿಗೆ ಆಯ್ದ ಕನ್ನಡ ಗೀತೆಗಳನ್ನು ಕಲಿಸುವ ಮಹತ್ವಪೂರ್ಣ ಕಾರ್ಯವನ್ನು ಮರಾಠಿ ಶಿಕ್ಷಕ ಹಾಗೂ ಸಮೂಹ ಗಾಯನದ ತರಬೇತುದಾರ ವಿನಾಯಕ ಮೋರೆ ಮಾಡಿದ್ದಾರೆ. ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ 1000 ವಿದ್ಯಾರ್ಥಿಗಳು ಸುವರ್ಣ ವಿಧಾನಸೌಧದಲ್ಲಿ, ಉಳಿದವರು ಬೇರೆ ಬೇರೆ ಕಡೆಗಳಲ್ಲಿ ಏಕಕಾಲಕ್ಕೆ ಹಾಡಲಿದ್ದಾರೆ. ರಾಜ್ಯೋತ್ಸವಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ. ಮೋರೆ ಅವರು ವಿವಿಧ ಬಿ.ಇಡಿ. ಕಾಲೇಜುಗಳ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಈ ಹಾಡುಗಳನ್ನು ಕಲಿಸಿದ್ದಾರೆ.

ಸರ್ಕಾರಿ ಬಿ.ಇಡಿ. ಕಾಲೇಜು, ಎಂ.ಎನ್.ಆರ್.ಎಸ್. ಕಾಲೇಜು, ಸಾಗರ ಬಿ.ಇಡಿ. ಕಾಲೇಜು, ಕೆ.ಎಸ್.ಆರ್ ಕಾಲೇಜು, ಶೇಖ್ ಕಾಲೇಜು, ಸಿದ್ದರಾಮೇಶ್ವರ ಚಂದ್ರಗಿರಿ ಮಹಿಳಾ ಕಾಲೇಜು, ಸಂಗೊಳ್ಳಿ ರಾಯಣ್ಣ ಘಟಕ ಕಾಲೇಜು, ಪಂಡಿತ್ ನೆಹರೂ ಕಾಲೇಜು, ಜೀವನ ಜ್ಯೋತಿ ಶಾಲೆ, ಲಲ್‌ ಡೇಲ್ ಸೆಂಟ್ರಲ್ ಶಾಲೆ, ಉಷಾತಾಯಿ ಗೋಗಟೆ ಪ್ರೌಢಶಾಲೆ ಮೊದಲಾದ ಕಡೆಗಳಲ್ಲಿ ಗೀತಗಾಯನ ಮೊಳಗಲಿದೆ. ಕನ್ನಡದ ಕಂಪು ಪಸರಿಸಲಿದೆ.

ಸಂಗೀತ ಶಿಕ್ಷಕ ಮೋರೆ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಮರಾಠಿ ಭಾಷಿಕರಾದರೂ ಕನ್ನಡ ಗೀತೆಗಳನ್ನು ಅತ್ಯಂತ ಪ್ರೀತಿಯಿಂದ ಕಲಿಯುತ್ತಾರೆ; ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ.

‘ಕನ್ನಡ ನಾಡು-ನುಡಿ ಗೌರವಿಸಿ’

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಲದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ’ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡಲಾಯಿತು.

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಎಂ. ಜಯಪ್ಪ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ನಾಡು-ನುಡಿ ಕುರಿತು ಅಭಿಮಾನ ಮೂಡಿಸಲು ಇಂತಹ ಚಟುವಟಿಕೆಗಳು ಸಹಕಾರಿಯಾಗುತ್ತವೆ’ ಎಂದರು.

‘ಕವಿಗಳು ಮತ್ತು ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ನಾಡಿನ ನೆಲ-ಜಲ, ನುಡಿಯ ಕುರಿತು ಹಾಡಿ ಹೊಗಳಿದ್ದಾರೆ. ಅವರ ಹಾಡುಗಳನ್ನು ಹಾಡಿ ನಾವೆಲ್ಲರೂ ನಮ್ಮ ಸಂಸ್ಕೃತಿ, ನಾಡು-ನುಡಿ, ನೆಲ-ಜಲ ಮತ್ತು ಭಾಷೆಯನ್ನು ಗೌರವಿಸೋಣ. ಉಳಿಸಿ–ಬೆಳೆಸೋಣ’ ಎಂದು ಹೇಳಿದರು.

ಸಂಗೀತ ಸಂಯೋಜಕ ವಿನಾಯಕ ಮೋರೆ ಅವರು ರಾಷ್ಟ್ರಕವಿ ಕುವೆಂಪು ರಚಿಸಿದ ಬಾರಿಸು ಕನ್ನಡ ಡಿಂಡಿಂಮವ ಹಾಗೂ ಜಯ ಭಾರತ ಜನನಿಯ ತನುಜಾತೆ, ಕವಿ ಕೆ.ಎಸ್. ನಿಸಾರ್ ಅಹ್ಮದ್ ರಚಿಸಿದ ಜೋಗದ ಸಿರಿ ಬೆಳಕಿನಲ್ಲಿ, ವರನಟ ರಾಜಕುಮಾರ್ ಹಾಡಿರುವ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡುಗಳಿಗೆ ಸಂಗೀತ ಸಂಯೋಜಿಸಿ ಕಾಲೇಜಿನ 500 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಐಕ್ಯೂಎಸಿ ಸಂಯೋಜಕ ಆದಿನಾಥ ಉಪಾಧ್ಯೆ ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ.ಸುಮನ ಮುದ್ದಾಪುರ ಇದ್ದರು.

ಆದಿನಾಥ ಉಪಾಧ್ಯೆ ಸ್ವಾಗತಿಸಿದರು. ಡಾ.ವೈ.ಎ. ಜಕ್ಕಣ್ಣವರ ನಿರೂಪಿಸಿದರು. ಡಾ.ಅರ್ಜುನ ಜಂಬಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT