ಗಡಿಯಲ್ಲಿ ಸಿಗದ ಸೌಲಭ್ಯ: ಹೋರಾಟಕ್ಕೆ ನಿರ್ಧಾರ

7
ಕನ್ನಡಿಗರಿಂದ ಪೂರ್ವಭಾವಿ ಸಭೆ

ಗಡಿಯಲ್ಲಿ ಸಿಗದ ಸೌಲಭ್ಯ: ಹೋರಾಟಕ್ಕೆ ನಿರ್ಧಾರ

Published:
Updated:
ಅಥಣಿ ತಾಲ್ಲೂಕಿನ ಗುಗವಾಡದಲ್ಲಿ ಭಾನುವಾರ ನಡೆದ ‘ಗಡಿನಾಡ ಕನ್ನಡಿಗರ ಕೂಗು’ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿದರು

ಅಥಣಿ: ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ಮಹಾಜನ ವರದಿಯ ಶಿಫಾರಸು ಪ್ರಕಾರ ಸೌಲಭ್ಯಗಳನ್ನು ಕೊಡಿಸಬೇಕು ಎಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿ ಹೋರಾಟ ಕೈಗೊಳ್ಳುವುದಕ್ಕಾಗಿ ತಾಲ್ಲೂಕಿನ ಗುಗವಾಡ ಗ್ರಾಮದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಲಾಯಿತು. ‌

‘ಮಹಾರಾಷ್ಟ್ರದ ಗಡಿಯಲ್ಲಿರುವ ಕೆಲವು ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಬೇಕು’ ಎಂದು ಆಗ್ರಹಿಸಲಾಯಿತು. ಬೇಡಿಕೆ ಈಡೇರಿಕೆಗೆ ಸ್ಪಂದಿಸದಿದ್ದಲ್ಲಿ ಎರಡೂ ಸರ್ಕಾರಗಳ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.

‘ಗಡಿನಾಡ ಕನ್ನಡಿಗರ ಕೂಗು’ ಶೀರ್ಷಿಕೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಅರವಿಂದ ದಳವಾಯಿ, ‘ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ನೀವೇ ನಿಜವಾದ ಗಡಿ ಕನ್ನಡಿಗರು. ನಿಮಗೆ ಸಿಗಬೇಕಾದ ಸೌಲಭ್ಯಗಳು ಅಥಣಿ, ಕಾಗವಾಡ, ನಿಪ್ಪಾಣಿ ಪಟ್ಟಣಗಳಲ್ಲಿರುವವರ ಪಾಲಾಗಿವೆ. ಮುಂದಿನ ಸಭೆಯನ್ನು ಬೆಳಗಾವಿಯಲ್ಲಿ ನಡೆಸಲಾಗುವುದು. ಗ್ರಾಮದ ಮುಖಂಡರು ಭಾಗವಹಿಸಬೇಕು. ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಪ್ರಾಧಿಕಾರದ ಸದಸ್ಯರನ್ನೂ ಕರೆಸೋಣ. ನಂತರ ಮುಂದಿನ ಹೋರಾಟ ರೂಪಿಸೋಣ’ ಎಂದು ಹೇಳಿದರು.

ಗಡಿ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜ ಅರಗೊಡ್ಡಿ ಮಾತನಾಡಿ, ‘ಆದಷ್ಟು ಬೇಗ ನಮಗೂ ಹೈದರಾಬಾದ್ ಕರ್ನಾಟಕದ ರೀತಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ನಮ್ಮನ್ನು ಕರ್ನಾಟಕಕ್ಕೆ ಸೇರಿಸುವಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ನಮಗೆ ಮಹಾರಾಷ್ಟ್ರ ಸರ್ಕಾರದಿಂದಲೂ ಸೌಲಭ್ಯ ದೊರೆಯುತ್ತಿಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಶೇ 5 ಮೀಸಲಾತಿ ಇದೆ. ಆದರೆ, ಉದ್ಯೋಗದಲ್ಲಿ ಮೀಸಲಾತಿ ಇಲ್ಲ. ಇದರಿಂದಾಗಿ ನಮ್ಮ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ತಿಳಿಸಿದರು.

ಮುಖಂಡ ಬಿ.ಕೆ. ಗಂಗಾಧರ ಮಾತನಾಡಿ, ‘ಗಡಿ ಭಾಗದ ಬಗ್ಗೆ ಅಭಿಮಾನ ಇರುವಂತಹ ಅರವಿಂದ ದಳವಾಯಿ ಅವರಂಥವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಬೇಕು. ಆಗ, ಗಡಿ ಕನ್ನಡಿಗರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಶರಣ ಚಾಳೆಕರ ಅಜ್ಜ ಮಾತನಾಡಿ, ‘ಬಸ್ ಸೌಲಭ್ಯ ಸಮರ್ಪಕವಾಗಿ ಇಲ್ಲದಿರುವುದರಿಂದ ಮಕ್ಕಳಿಗೆ ಅನಾನೂಕೂಲವಾಗುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳನ್ನು ದೂರದ ಊರಿಗೆ ಶಾಲೆ– ಕಾಲೇಜುಗಳಿಗೆ ಕಳುಹಿಸುತ್ತಿಲ್ಲ. ಬೇಗನೆ ಮದುವೆ ಮಾಡಿಬಿಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಸ್ ಸೌಲಭ್ಯ ಒದಗಿಸಲಾಗಿತ್ತು. ನಂತರ ನಿಲ್ಲಿಸಲಾಗಿದೆ. ಇದಕ್ಕೆ ಕಾರಣವೇನು’ ಎಂದು ಕೇಳಿದರು.

ಮುಖಂಡರಾದ ರಾಜಾಸಾಬ ಡಪಳೆ ಸರಕಾರ, ಶ್ರೀಶೈಲ ಸಂತೀಕರ, ಅಪ್ಪಾಸಾಬ ನ್ಯಾಮದ, ಗಂಗಪ್ಪ ಕೊಂಕಣಿ, ರಾಯಪ್ಪ ಅಂದಾನಿ, ಅಣ್ಣಪ್ಪ ಅಂದಾನಿ, ಶಿವಾನಂದ ತಾಂವಶಿ, ಪೀರಗೊಂಡ ಬಿರಾದಾರ, ಶಿವಾನಂದ ಮುಡಶಿ, ಬಸವರಾಜ ನಂದೇಶ್ವರ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !