ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋದವರು ಹೋಗಲಿ ತಲೆ ಕೆಡಿಸಿಕೊಳ್ಳಬೇಡಿ, ಹೊಸ ನಾಯಕರ ಹುಟ್ಟುಹಾಕಿ: ರಮೇಶ ಜಾರಕಿಹೊಳಿ

Last Updated 16 ಏಪ್ರಿಲ್ 2023, 13:55 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿ ನಾಯಕರ ಪಕ್ಷವಲ್ಲ; ಕಾರ್ಯರ್ತರ ಪಕ್ಷ. ಇಲ್ಲಿ ಯಾವುದೇ ನಾಯಕ ಬಿಟ್ಟುಹೋದರೂ ತಲೆ ಕೆಡಿಸಿಕೊಳ್ಳಬೇಡಿ. ನೀವೇ ಒಂದಾಗಿ ಹೊಸ ನಾಯಕರನ್ನು ಹುಟ್ಟುಹಾಕಿ’ ಎಂದು ಶಾಸಕ ರಮೇಶ ಜಾರಕಿಹೊಳಿ ಕರೆ ನೀಡಿದರು.

ನಗರದಲ್ಲಿ ಭಾನುವಾರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ವಂಚಿತರು ಹಾಗೂ ಮುಖಂಡರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮಾತನಾಡಿದರು.

‘ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಪಕ್ಷ ಸಾಕಷ್ಟು ನೀಡಿದೆ. ಆದರೂ ಬಿಟ್ಟುಹೋಗಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದ ಎಲ್‌.ಕೆ. ಅಡ್ವಾನಿ ಅವರಂಥ ನಾಯಕರು ದೊಡ್ಡ ತ್ಯಾಗ ಮಾಡಿದ್ದಾರೆ. ಪಕ್ಷ ಬಿಟ್ಟು ಹೋದವರನ್ನು ಮರೆತುಬಿಡಿ. ಕಸಗುಡಿಸಿ ಸ್ವಚ್ಛ ಮಾಡಿ, ನೀವೇ ನಾಯಕರಾಗಿ ಬೆಳೆಯಿರಿ’ ಎಂದರು.

‘ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ನಾಗೇಶ ಮನ್ನೋಳಕರ ಅವರನ್ನು ಗೆಲ್ಲಿಸೋಣ. ಯಾರು ಯಾರು ಟಿಕೆಟ್‌ನಿಂದ ವಂಚಿತರಾಘಿದ್ದೀರಿ ಅವರೆಲ್ಲರಿಗೂ ಪಕ್ಷ ಆದ್ಯತೆ ನೀಡುತ್ತದೆ. ನೀವೆಲ್ಲ ಒಂದಾಗಿ ನಿಂತರೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸೋಲಿಸುವುದು ಸುಲಭ’ ಎಂದರು.

‘ಟಿಕೆಟ್‌ ಕೈ ತಪ್ಪಿದರೂ ಸಂಜಯ ಪಾಟೀಲ ಹಾಗೂ ಧನಂಜಯ ಜಾಧವ ಅವರು ಪಕ್ಷದ ಬಗ್ಗೆ ಭಾವುಕರಾಗಿ ಮಾತನಾಡಿದರು. ಅಭ್ಯರ್ಥಿ ಗೆಲ್ಲಿಸುವಂತೆ ಪ್ರಾರ್ಥಿಸಿದರು. ಇಂಥ ಬೆಳವಣಿಗೆಯನ್ನು ಜಿಲ್ಲೆಯ ರಾಜಕಾರಣದಲ್ಲಿ ಮಾತ್ರ ನೋಡಲು ಸಾಧ್ಯ’ ಎಂದೂ ಪ್ರಶಂಸಿಸಿದರು.

‘ಜಿಲ್ಲೆಯಲ್ಲಿ 15 ಸ್ಥಾನ ಗೆಲ್ಲುವುದು ನಮ್ಮ ಗುರಿ. ಅಥಣಿ, ಕಾಗವಾಡ ಕಡೆಗೆ ನಾನು ಹೆಚ್ಚು ಗಮನ ಹರಿಸಬೇಕಿದೆ. ಬೆಳಗಾವಿಯಲ್ಲಿ ಸಂಜಯ ಹಾಗೂ ಧನಂಜಯ ಅವರು ಅಭ್ಯರ್ಥಿ ಗೆಲ್ಲಿಸಲು ಮುಂದಾಗಲಿದ್ದಾರೆ’ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ‘ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸೋಲಿಸುವುದಲ್ಲ, ಬಿಜೆಪಿ ಗೆಲ್ಲಿಸುವುದು ನಮ್ಮ ಉದ್ದೇಶವಾಗಬೇಕು. ಭೂತ್‌ ಮಟ್ಟದಲ್ಲಿ ನಾವೆಲ್ಲ ಒಂದಾದರೆ ಸಾಕು’ ಎಂದರು.

ನರೇಂದ್ರ ಮೋದಿ ಅವರಿಗಾಗಿ ಬಿಜೆಪಿಗೆ ಟಿಕೆಟ್‌ ನೀಡಿ ಎಂದು ಅವರು ಶರ್ಟ್ ಮುಂದೆ ಹಿಡಿದು ಬೇಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT