ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎಗೆ ಹೊಸ ಕಟ್ಟಡ: ಕಿಕ್ಕೂ ಇಲ್ಲ, ಬ್ಯಾಕೂ ಇಲ್ಲ: ಜಿ.ಸಿ. ಮಾಧುಸ್ವಾಮಿ

Last Updated 14 ಡಿಸೆಂಬರ್ 2021, 22:16 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈಗಾಗಲೇ ಹಲವಾರು ಬಡಾವಣೆಗಳನ್ನು ನಿರ್ಮಿಸಿದ್ದು, ಅದಕ್ಕೆ ಸಂಬಂಧಿಸಿದ ಭೂಸ್ವಾಧೀನದ ಮಹತ್ವದ ದಾಖಲೆಗಳನ್ನು ಶೇಖರಿಸಲು ಮತ್ತು ನ್ಯಾಯಾಲಯದ ದಾವೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಡಲು ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಇಲ್ಲಿ ಕಿಕ್ಕೂ ಇಲ್ಲ, ಬ್ಯಾಕೂ ಇಲ್ಲ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜಿ.ಸಿ. ಮಾಧುಸ್ವಾಮಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಂ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ ಸಚಿವರು, ‘ಹೊಸತಾಗಿ ಕಟ್ಟಡ ನಿರ್ಮಿಸುವುದು ರಾಜ್ಯದಲ್ಲಿ ಹೊಸದಲ್ಲ. ಬಿಡಿಎ ಅಭಿವೃದ್ಧಿ ಆಗಲಿ, ಚೆನ್ನಾಗಿ ಕಾಣಲಿ ಎಂಬ ಆಶಯ ನಮ್ಮದು. ಇಲ್ಲಿ ಜನರಿಗೆ ಸುಲಭವಾಗಿ ಕೆಲಸಗಳು ಆಗಬೇಕು. ಬಿಡಿಎ ವ್ಯಾಪ್ತಿಗೆ ಹೋಲಿಸಿದರೆ ಕಚೇರಿಗೆ ಸಾಕಷ್ಟು ಸ್ಥಳಾವಕಾಶದ ಅಗತ್ಯವಿದೆ’ ಎಂದರು.

ಬಿಡಿಎ ಹೊಸ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ನಾರಾಯಣಸ್ವಾಮಿ, ‘ಬಿಡಿಎ ಆವರಣದಲ್ಲಿ 2004ರಲ್ಲಿ ನಿರ್ಮಿಸಿದ್ದ ಕಟ್ಟಡಗಳನ್ನು ಕೆಡವಿ ₹ 240 ಕೋಟಿ ವೆಚ್ಚದಲ್ಲಿ ಬಿಡಿಎ ಭವನ ನಿರ್ಮಿಸುವ ಪ್ರಸ್ತಾವನೆಯನ್ನು ಬಿಡಿಎ ಅಧ್ಯಕ್ಷರು ಸಲ್ಲಿಸಿದ್ದಾರೆ. ಬಿಡಿಎ ಎನ್ನುವುದು ಬಿಳಿಯಾನೆಯಂತೆ. ಅಲ್ಲೇನು ನಡೆಯುತ್ತಿದೆ ಎಂಬ ಅರಿವಿದೆ. ಸುಸ್ಥಿತಿಯಲ್ಲಿರುವ ಕಟ್ಟಡ ಕೆಡವಿ, ರಾಜ್ಯದ ಬೊಕ್ಕಸಕ್ಕೆ ಕತ್ತರಿ ಹಾಕುವುದು ಸರಿಯಲ್ಲ. ಸರ್ಕಾರ ಅದನ್ನು ಸಮರ್ಥನೆ ಮಾಡಿಕೊಳ್ಳಬಾರದು. 17 ವರ್ಷ ಹಿಂದಿನ ಕಟ್ಟಡ ಕೆಡವಿ ಹಾಕುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಬಿಡಿಎ ಕೇಂದ್ರ ಕಚೇರಿಯ ಆವರಣದಲ್ಲಿ ಸುಸಜ್ಜಿತವಾದ ಮತ್ತು ಆಧುನಿಕ ಸೌಲಭ್ಯ ಮತ್ತು ಹೆಚ್ಚಿನ ಸ್ಥಳಾವಕಾಶವಿರುವ ನೂತನ ಕಟ್ಟಡ ನಿರ್ಮಾಣದ ಯೋಜನೆಯ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಗೆ ಮಂಡಿಸಲಾಗಿದೆ. ಕಟ್ಟಡ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ವಿಷಯವನ್ನು ಮರು ಪರಿಶೀಲಿಸುವ ಪ್ರಶ್ನೆಯೇ ಇಲ್ಲ’ ಎಂದರು.

‘ಕೇವಲ ಕಡತಗಳು, ದಾಖಲೆ ಪತ್ರಗಳನ್ನು ಇಡಲು ಸ್ಥಳಾವಕಾಶದ ಕೊರತೆ ಇದೆ ಎಂದು ಅದನ್ನು ನೆಲಸಮ ಮಾಡಿ ಹೊಸ ಕಟ್ಟಡವನ್ನು ನಿರ್ಮಿಸಲು ಹೊರಟಿರುವುದು ವಿಷಾದದ ಸಂಗತಿ’ ಎಂದು ಕಾಂಗ್ರೆಸ್ಸಿನ ಪಿ.ಆರ್. ರಮೇಶ್, ನಜೀರ್ ಅಹ್ಮದ್, ಬಿ.ಕೆ. ಹರಿಪ್ರಸಾದ್, ಯು.ಬಿ. ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಅನುದಾನ ತಾರತಮ್ಯ; ಸದಸ್ಯರ ಆಕ್ರೋಶ
ಬೆಳಗಾವಿ (ಸುವರ್ಣ ವಿಧಾನಸೌಧ): ನಗರದ ಶಾಸಕರಿಗೆ ಅನುದಾನ ಹಂಚಿಕೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ತೀವ್ರ ತಾರತಮ್ಯ ಮಾಡುತ್ತಿದೆ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಆರ್.ಮಂಜುನಾಥ್ ಅವರು, ’ಜಲಮಂಡಳಿ ವತಿಯಿಂದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿ ಅನುಷ್ಠಾನದ ವೇಳೆ ದಾಸರಹಳ್ಳಿ ಕ್ಷೇತ್ರದಲ್ಲಿ 158 ಕಿ.ಮೀ. ಉದ್ದದ ರಸ್ತೆ ಹಾಳಾಗಿದೆ. ಈ ರಸ್ತೆಗಳ ದುರಸ್ತಿಗೆ ₹327 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ’ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಪರವಾಗಿಉತ್ತರ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲ’ ಎಂದರು.

ಈ ಉತ್ತರದಿಂದ ಆಕ್ರೋಶಗೊಂಡ ಮಂಜುನಾಥ್‌, ‘ಕಾಮಗಾರಿಗಾಗಿ ಕ್ಷೇತ್ರದ ಶೆಟ್ಟಿಹಳ್ಳಿ ಹಾಗೂ ಬಾಗಲಗುಂಟೆ ವಾರ್ಡ್‌ಗಳ ರಸ್ತೆಗಳನ್ನು ಅಗೆಯಲಾಗಿದೆ. ಈ ರಸ್ತೆಗಳ ದುರಸ್ತಿಗೆ ₹406 ಕೋಟಿಯ ಅಂದಾಜುಪಟ್ಟಿ ಸಿದ್ಧಪಡಿಸಲಾಗಿತ್ತು. ಬಳಿಕ ಅದನ್ನು ₹327 ಕೋಟಿಗೆ ಪರಿಷ್ಕರಣೆ ಮಾಡಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಯವರೇ ಸದನದಲ್ಲಿ ಉತ್ತರ ನೀಡಿದ್ದರು’ ಎಂದು ಗಮನ ಸೆಳೆದರು.

ಜೆ.ಸಿ.ಮಾಧುಸ್ವಾಮಿ, ‘ನಗರದ ಕ್ಷೇತ್ರಗಳ ಬಗ್ಗೆ ನನಗೆ ಜ್ಞಾನ ಕಡಿಮೆ. ದಾಸರಹಳ್ಳಿ ಕ್ಷೇತ್ರದ ಸಮಸ್ಯೆ ಬಗೆಹರಿಸುವ ಸಂಬಂಧ ಮುಖ್ಯಮಂತ್ರಿ ಜತೆಗೆ ಚರ್ಚಿಸುವೆ‘ ಎಂದು ಭರವಸೆ ನೀಡಿದರು.

ಸಚೇತಕರಿಗೆ ಹುಡುಕಾಟ
ಬೆಳಗಾವಿ: ವಿಧಾನಪರಿಷತ್ತಿನ ಮುಂದಿನ ಅಧಿವೇಶನದಲ್ಲಿ ಮೂರೂ ರಾಜಕೀಯ ಪಕ್ಷಗಳ ಸಚೇತಕರು ಬದಲಾವಣೆ ಆಗಲಿದ್ದಾರೆ.

ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿದ್ದ ಮಹಾಂತೇಶ ಕವಟಗಿಮಠ, ಜೆಡಿಎಸ್‌ ಸಚೇತಕ ಅಪ್ಪಾಜಿಗೌಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತಿದ್ದರೆ, ಕಾಂಗ್ರೆಸ್‌ ಸಚೇತಕ ಎಂ.ನಾರಾಯಣಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಈಗ ಮೂರು ಪಕ್ಷಗಳೂ ಸಚೇತಕರಿಗಾಗಿ ಹೊಸಬರ ಹುಡುಕಾಟ ನಡೆಸಬೇಕಾಗಿದೆ.

ಬಿಜೆಪಿಯಲ್ಲಿ ಮುಖ್ಯಸಚೇತಕ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಆಯನೂರು ಮಂಜುನಾಥ್, ಅರುಣ್ ಶಹಾಪೂರ, ರಘುನಾಥರಾವ್‌ ಮಲ್ಕಾಪುರೆ, ಎನ್‌.ರವಿಕುಮಾರ್‌, ತೇಜಸ್ವಿನಿಗೌಡ ಅವರ ಹೆಸರು ಕೇಳಿ ಬಂದಿದೆ. ಸಂಘಟನೆ ಮತ್ತು ಜಾತಿ ಆಧಾರದಲ್ಲಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT