ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್ | ಬೆಳಗಾವಿ; ’ಸಂಪನ್ಮೂಲ‘ಕ್ಕೆ ಕಾದಿರುವ ಯೋಜನೆಗಳು

ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ ಮೇಲೆ ನಿರೀಕ್ಷೆ
Last Updated 18 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹಲವು ನೀರಾವರಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.

ಜಲಸಂಪನ್ಮೂಲ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಆ ಖಾತೆ ನಿರ್ವಹಿಸುತ್ತಿರುವ ಗೋವಿಂದ ಕಾರಜೋಳ ಅವರ ಮೇಲೆ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮ್ಮ ಭಾಗದಲ್ಲಿ ಕೃಷಿಗೆ ಸಹಕಾರಿಯಾಗುವಂತೆ ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡುತ್ತಾರೆಯೇ ಎಂದು ಕಾದಿದ್ದಾರೆ. ಇಲಾಖೆಯಿಂದಲೂ ಕೆಲವು ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. ರೈತರಿಂದಲೂ ಬೇಡಿಕೆ ಇದೆ. ನನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂಬ ಒತ್ತಾಯವಿದೆ.

ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿನ ಕರಗಾಂವ, ಹನುಮಾನ ಮತ್ತು ಬೆಂಡವಾಡ ಏತನೀರಾವರಿ ಯೋಜನೆಗೆ ಬೇಡಿಕೆ ಇದೆ. ಕಾಗವಾಡದಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಹಾಗೂ ಆ ಭಾಗದ 23 ಕೆರೆಗಳನ್ನು ತುಂಬಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಮಹಾಲಕ್ಷ್ಮಿ ಏತ ಏತ ನೀರಾವರಿ:ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿನ 18 ಗ್ರಾಮಗಳ 6,400 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗೆ ಅನುಷ್ಠಾನಕ್ಕೆ ಹಿಂದಿನಿಂದಲೂ ಒತ್ತಾಯಿಸುತ್ತಾ ಬರಲಾಗುತ್ತಿದೆ.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆ ಕೈಗೊಳ್ಳಲು ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ನೀರಾವರಿ ಅಧಿಕಾರಿಗಳಿಗೆ ಸೂಚಿಸಿದ್ದರು. 0.92 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡುವುದಾಗಿ ಹೇಳಲಾಗಿತ್ತು. ನಂತರ ಮುಖ್ಯಮಂತ್ರಿ ಆಗಿದ್ದ ಜಗದೀಶ ಶೆಟ್ಟರ್‌ ಅವರು ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದರು. ಆದರೆ ಅನುಷ್ಠಾನಗೊಂಡಿಲ್ಲ.

ಯೋಜನೆಯು ₹ 383 ಕೋಟಿ ಯೋಜನಾ ವರದಿ ತಯಾರಿಸಿ ಸರ್ಕಾರದ ಆಡಳಿತಾತ್ಮಕ ಮಂಜೂರಾತಿಗೆ ಸಲ್ಲಿಸಲಾಗಿದೆ. ಈ ಯೋಜನಾ ವರದಿಗೆ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಅನುಮೋದನೆ ನೀಡಿ 2022-23ನೇ ಸಾಲಿನಲ್ಲಿ ಅನುದಾನ ಕಾಯ್ದಿರಿಸಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಬಿಜೆಪಿ ಮುಖಂಡ ಮಹಾಂತೇಶ ಕವಟಗಿಮಠ ಅವರ ನೇತೃತ್ವದಲ್ಲಿ ರೈತರ ನಿಯೋಗ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.‌

ಜೀವ ತುಂಬಬೇಕಿದೆ:ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ 11 ಏತ ನೀರಾವರಿ ಯೋಜನೆಗಳ ಸಮೀಕ್ಷಾ ಕಾರ್ಯಕ್ಕೆ ಆದೇಶ ನೀಡಿದ್ದರು. ಅದಕ್ಕೂ ಜೀವ ಕೊಡಬೇಕಾಗಿದೆ.

ರಾಮದುರ್ಗ ತಾಲ್ಲೂಕಿನಲ್ಲಿ ಕೆರೆಗಳನ್ನು ತುಂಬಿಸುವ ಕಾಮಗಾರಿ ನನೆಗುದಿಗೆ ಬಿದ್ದಿದೆ. ಅದೇ ತಾಲ್ಲೂಕಿನ ಪ್ರವಾಹಪೀಡಿತ ಹಂಪಿಹೊಳಿ ಗ್ರಾಮದಲ್ಲಿ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ₹126 ಕೋಟಿ ನೀಡಲು ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿತ್ತು. ನದಿಯಿಂದ ನೀರು ಅಧಿಕ ಪ್ರಮಾಣದಲ್ಲಿ ಉಕ್ಕಿ ಸಂಭವಿಸಬಹುದಾದ ಹಾನಿ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಆದರೆ, ಈವರೆಗೂ ಕಾಮಗಾರಿ ಆರಂಭವಾಗಿಲ್ಲ.

ಅಥಣಿ ತಾಲ್ಲೂಕಿನ ಪೂರ್ವ ಭಾಗದ ಗಡಿ ಗ್ರಾಮಗಳ ರೈತರ ನೆರವಿಗೆ ಅಮ್ಮಾಜೇಶ್ವರಿ (ಕಕಮರಿ) ಏತ ನೀರಾವರಿ ಯೋಜನೆಗೆ ಮಂಜೂರಾತಿ ಮಾಡಬೇಕು. ಕಕಮರಿ, ಕನ್ನಾಳ, ತೆಲಸಂಗ, ಪಡತರವಾಡಿ, ಹಾಲಳ್ಳಿ, ಅರಟಾಳ, ಬನ್ನೂರ, ರಾಮತೀರ್ಥ, ಕೊಟ್ಟಲಗಿ, ಐಗಳಿ ಭಾಗದ 22,500 ಹೆಕ್ಟರ್ ಜಮೀನುಗಳಿಗೆ ನೀರು ಒದಗಿಸಬೇಕು ಎನ್ನುವುದು ಅಲ್ಲಿನವರ ಆಗ್ರಹವಾಗಿದೆ.

ಹಲವು ಬೇಡಿಕೆಗಳು
* ಘಟಪ್ರಭಾ ಬಲದಂಡೆ ಕಾಲುವೆಯ ಆಯ್ದ ಭಾಗಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ₹ 702 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ.
* ಜಿಲ್ಲೆಯಲ್ಲಿ ಕೆರೆಗಳನ್ನು ತುಂಬಿಸುವ 5 ಯೋಜನೆಗಳು ಚಾಲ್ತಿಯಲ್ಲಿವೆ. ಇದರಿಂದ 125 ಕೆರೆಗಳನ್ನು ಮಳೆಗಾಲದಲ್ಲಿ ತುಂಬಿಸುವ ಗುರಿ ಹೊಂದಲಾಗಿದೆ.
* 9 ಹೊಸ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಒಟ್ಟು 9.69 ಟಿಎಂಸಿ ಅಡಿ ನೀರಿನ ಹಂಚಿಕೆಯ ಅಗತ್ಯವಿದೆ ಎಂದು ಇಲಾಖೆ ಹೇಳಿದೆ.
* ಅಡವಿಸಿದ್ದೇಶ್ವರ, ಶಂಕರಲಿಂಗ, ಕರಗಾಂವ, ಸತ್ತಿಗೇರಿ, ರಾಮಲಿಂಗೇಶ್ವರ, ಅಮ್ಮಾಜೇಶ್ವರಿ, ಮರೆಗುದ್ದಿ, ಚನ್ನವೃಷಭೇಂದ್ರ, ಮಲ್ಲಿಕಾರ್ಜುನ, ಬೆಂಡವಾಡ ಹಾಗೂ ಹನುಮಾನ್‌ ಏತ ನೀರಾವರಿ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನದ ನಿರೀಕ್ಷೆ ಹೊಂದಲಾಗಿದೆ.
* ಅಡವಿ ಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಬೇಕು ಎನ್ನುವುದು ಹುಕ್ಕೇರಿ ಭಾಗದವರ ಒತ್ತಾಯವಾಗಿದೆ.
* ಸಮೀಪದಲ್ಲೇ (6.ಕಿ.ಮೀ.) ಹರಿಯುವ ಮಲಪ್ರಭಾ ನದಿಯಿಂದ ಬೈಲಹೊಂಗಲ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಒದಗಿಸಬೇಕು ಎನ್ನುವ ಬೇಡಿಕೆ ಹಿಂದಿನಿಂದಲೂ ಅಲ್ಲಿನ ಜನರದಾಗಿದೆ.
* ಸವದತ್ತಿ ಭಾಗದಲ್ಲಿ ಸತ್ತಿಗೇರಿ ಏತ ನೀರಾವರಿ ಯೋಜನೆಗೆ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT