ಗುರುವಾರ , ಅಕ್ಟೋಬರ್ 28, 2021
19 °C
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್‌ ಹೇಳಿಕೆ

ಸೆ.27ರಂದು ಕರ್ನಾಟಕ ಬಂದ್; ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೇಂದ್ರ ಸರ್ಕಾರವು ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಧಿಕ್ಕರಿಸಿ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಸೆ. 27ರಂದು ಕರ್ನಾಟಕ ಬಂದ್‌ಗೆ ಕೆರೆ ನೀಡಲಾಗಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೃಷಿಗೆ ಮಾರಕವಾಗಿದ ಕಾಯ್ದೆಗಳ ಮೂಲಕ ರೈತರ ಮರಣಶಾಸನವನ್ನು ಸರ್ಕಾರ ಬರೆದಿದೆ. ಹೀಗಾಗಿ, ಹೋರಾಟದ ಹಾದಿ ತುಳಿದಿದ್ದೇವೆ’ ಎಂದು ಹೇಳಿದರು.

‘ರೈತ ಹೋರಾಟಗಾರರ ಜೊತೆ ಕೇಂದ್ರ ಸರ್ಕಾರ 12 ಬಾರಿ ಸಭೆ ನಡೆಸಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಕೇವಲ ನಾಟಕೀಯ ವರ್ತನೆ ತೋರಲಾಗುತ್ತಿದೆ. ಪ್ರಜಾ ಸರ್ಕಾರ ಎನ್ನುವುದನ್ನು ಮರೆತು ಕಂಪನಿಗಳ ಸರ್ಕಾರದ ರೀತಿ ವರ್ತಿಸುತ್ತಿದೆ’ ಎಂದು ಆರೋಪಿಸಿದರು.

‘ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿ ನಡೆಸುವ ಬಂದ್‌ಗೆ ನೂರಾರು ರೈತ, ಜನಪರ, ಕಾರ್ಮಿಕ, ದಲಿತ, ವ್ಯಾಪಾರಿ ಸಂಘಟನೆಗಳು ಬೆಂಬಲ ನೀಡಿವೆ. ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರ ಮೇಲೆ ಗದಾಪ್ರಹಾರವನ್ನು ಸರ್ಕಾರ ನಡೆಸಿದೆ. ಹೀಗಾಗಿ, ಎಲ್ಲ ವರ್ಗದವರೂ ಬಂದ್‌ಗೆ ಸಹಕರಿಸಬೇಕು’ ಎಂದು ಕೋರಿದರು.

‘ಸರ್ಕಾರವು ಸಕ್ಕರೆ ಕಂಪನಿಗಳ ಒತ್ತಡಕ್ಕೆ ಮಣಿದು ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ. ವರ್ಷಕ್ಕೆ 3–4 ಬಾರಿ ತೈಲ ದರ ಏರಿಸಿದೆ. ಆದರೆ, ಎರಡು ವರ್ಷಗಳಿಂದಲೂ ಕಬ್ಬಿಗೆ ಎಫ್‌ಆರ್‌ಪಿ ನಿಗದಿಪಡಿಸಿಲ್ಲ. ಟನ್‌ಗೆ ₹ 5 ಏರಿಸಿರುವುದು ಅವೈಜ್ಞಾನಿಕವಾಗಿದೆ. ಇದನ್ನು ಕೂಡಲೇ ಪುನರ್ ಪರಿಶೀಲಿಸಬೇಕು. ಕೃಷಿ ಇಲಾಖೆಯ ಪ್ರಕಾರ ಟನ್ ಕಬ್ಬು ಬೆಳೆಯಲು ಉತ್ಪಾದನಾ ವೆಚ್ಚ ₹ 3,200 ಆಗುತ್ತದೆ. ಅದಕ್ಕೆ ಲಾಭ ಸೇರಿಸಿ ದರ ನಿಗದಿಪಡಿಸಬೇಕು. ಎಫ್‌ಆರ್‌ಪಿ ಪುನರ್ ಪರಿಶೀಲಿಸದಿದ್ದರೆ ಅ.5ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕೆಲವು ಸಕ್ಕರೆ ಕಾರ್ಖಾನೆಗಳು ರೈತರ ದಾಖಲಾತಿಗಳನ್ನು ಪಡೆದು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದು ಕಬ್ಬಿನ ಹಣ ನೀಡುತ್ತಿವೆ. ವರ್ಷದ ನಂತರ ರೈತರಿಗೆ ಬ್ಯಾಂಕ್‌ಗಳಿಂದ ಸಾಲ ವಸೂಲಾತಿ ನೋಟಿಸ್ ಬರುತ್ತಿದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 1.30 ಲಕ್ಷ ಹೆಕ್ಟೇರ್ ಕಬ್ಬು ಹಾಳಾಗಿದೆ. ಆದರೆ, ಇನ್ನೂ ಪರಿಹಾರ ಸಿಕ್ಕಿಲ್ಲ. ಇಂತಹ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕಬ್ಬನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೀರನಗೌಡ ಕೋ. ಪಾಟೀಲ, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಉಪಾಧ್ಯಕ್ಷ ಸುರೇಶ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ಎಸ್.ಬಿ. ಸಿದ್ನಾಳ, ಈರಣ್ಣ ಅರಳಿಕಟ್ಟಿ, ಶಾಸಪ್ಪ ನಾವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು