ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮೂವರಷ್ಟೆ ಹಕ್ಕು ಚಲಾಯಿಸಿಲ್ಲ, 11 ತಾಲ್ಲೂಕುಗಳಲ್ಲಿ ಶೇ 100 ಮತದಾನ

Last Updated 10 ಡಿಸೆಂಬರ್ 2021, 14:00 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ವಿಧಾನಪರಿಷತ್‌ ದ್ವಿಸದಸ್ಯ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು, ಶೇ 99.97ರಷ್ಟು ಮತದಾನವಾಗಿದೆ.

ಒಟ್ಟು 8,849 ಮತದಾರರ ಪೈಕಿ 8,846 ಮಂದಿ ಮತ ಹಕ್ಕು ಚಲಾಯಿಸಿದ್ದಾರೆ. ರಾಮದುರ್ಗ, ಬೆಳಗಾವಿ ಮತ್ತು ಅಥಣಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಮತದಾನದಿಂದ ದೂರ ಉಳಿದಿದ್ದಾರೆ. ಉಳಿದ ತಾಲ್ಲೂಕುಗಳಲ್ಲಿ ಶೇ 100ರಷ್ಟು ಮತದಾನವಾಗಿದೆ.

ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಹಾನಗರಪಾಲಿಕೆ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 511 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಬೆಳಿಗ್ಗೆ ನೀರಸ, ನಂತರ ಬಿರುಸು: ಬೆಳಿಗ್ಗೆ ನೀರಸವಾಗಿತ್ತು. ಬಳಿಕ ಉತ್ತಮ ಪ್ರತಿಕ್ರಿಯೆ ದೊರೆಯಿತು. ಮೊದಲ 2 ಗಂಟೆಗಳಲ್ಲಿ ಅಂದರೆ, ಬೆಳಿಗ್ಗೆ 10ರವರೆಗೆ ಶೇ 7.10ರಷ್ಟು ಮಾತ್ರ ಮತದಾನವಾಗಿತ್ತು. ಮಧ್ಯಾಹ್ನ 12ರವರೆಗೆ ಶೇ 34.90ರಷ್ಟು, ಮಧ್ಯಾಹ್ನ 2ರವರೆಗೆ ಶೇ 64.89 ಹಾಗೂ ಸಂಜೆ 4.15ರವರೆಗೆ (ಸಂಜೆ 4ಕ್ಕೆ ಮತಗಟ್ಟೆಗೆ ಬಂದವರಿಗೆ ಅವಕಾಶ ಕೊಡಲಾಗಿತ್ತು) ಶೇ 99.97ರಷ್ಟು ಮತದಾನ ದಾಖಲಾಯಿತು. ಈ ಅಂಕಿ–ಅಂಶ ಗಮನಿಸಿದರೆ, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಲ್ಲಿ ಬಹುತೇಕರು ‘ಕಾದು’ ಮತ ಚಲಾಯಿಸಿರುವುದು ಸ್ಪಷ್ಟವಾಗಿದೆ.

ಮತಗಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗೆ ಆದ್ಯತೆ ನೀಡಲಾಯಿತು. ಮತದಾರರ ಆರೋಗ್ಯ ತಪಾಸಣೆ ಹಾಗೂ ಸ್ಯಾನಿಟೈಸರ್ ನೀಡುವುದಕ್ಕಾಗಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರ: ಬಿಜೆಪಿಯ ಮಹಾಂತೇಶ ಕವಟಗಿಮಠ ಸತತ 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಚನ್ನರಾಜ ಹಟ್ಟಿಹೊಳಿ, ಆಮ್ ಆದ್ಮಿ ಪಕ್ಷದಿಂದ ಶಂಕರ ಹೆಗಡೆ, ಪಕ್ಷೇತರರಾಗಿ ಲಖನ್ ಜಾರಕಿಹೊಳಿ, ಕಲ್ಮೇಶ ಗಾಣಗಿ ಹಾಗೂ ಶಂಕರ ಕುಡುಸೋಮಣ್ಣವರ ಅಂತಿಮ ಕಣದಲ್ಲಿದ್ದಾರೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ತೀವ್ರ ಪೈಪೋಟಿ ನೀಡಿರುವುದು ಪ್ರಚಾರದ ವೇಳೆ ಕಂಡುಬಂದಿತ್ತು.

ಈ ಎಲ್ಲರ ಭವಿಷ್ಯವನ್ನೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಬರೆದಾಗಿದೆ. ಎಲ್ಲರ ಭವಿಷ್ಯವೂ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಚುನಾವಣಾ ಸಾಮಗ್ರಿಗಳನ್ನು ಪಡೆಯುವ ಕಾರ್ಯ (ಡಿ–ಮಸ್ಟರಿಂಗ್) ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಿತು. ಮತಪೆಟ್ಟಿಗೆಗಳನ್ನು, ಮತ ಎಣಿಕೆ ನಡೆಯಲಿರುವ ಚಿಕ್ಕೋಡಿಯ ಆರ್‌.ಡಿ. ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ಡಿ.14ರಂದು ಮತ ಎಣಿಕೆ ನಡೆಯಲಿದ್ದು, ಯಾರಿಗೆ ಯಾವ ಪ್ರಾಶಸ್ತ್ಯ ದೊರೆತಿದೆ ಎನ್ನುವುದು ಅಂದು ತಿಳಿದುಬರಲಿದೆ.

ಏಜೆಂಟರಾಗಲು ಸತೀಶಗೆ ನಿಯಮ ಅಡ್ಡಿ
ಬೆಳಗಾವಿ:
ವಿಧಾನಪರಿಷತ್‌ ಚುನಾವಣೆಯಲ್ಲಿ ಮತಗಟ್ಟೆ ಏಜೆಂಟ್‌ ಆಗಲು ಬಯಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ನಿಯಮಗಳಲ್ಲಿ ಅವಕಾಶ ದೊರೆಯಲಿಲ್ಲ.

ಅವರು ಯಮಕನಮರಡಿ ಕ್ಷೇತ್ರದ ಶಾಸಕ ಹಾಗೂ ಈ ಚುನಾವಣೆಯಲ್ಲಿ ಮತದಾರರೂ ಆಗಿದ್ದರಿಂದ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ಚುನಾವಣಾ ಆಯೋಗದಿಂದ ಅನುಮತಿ ಸಿಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೂ ಅವರು, ಗೋಕಾಕ ತಾಲ್ಲೂಕಿನ ಗುಜನಾಳ ಗ್ರಾಮದ ಮತಗಟ್ಟೆ ಸಮೀಪದಲ್ಲಿ ಮತಗಟ್ಟೆ ಏಜೆಂಟರು ಹಾಗೂ ಬೆಂಬಲಿಗರೊಂದಿಗೆ ಕೆಲ ಸಮಯ ಕುಳಿತಿದ್ದರು.

‘ಗುಜನಾಳವು ಗೋಕಾಕ ತಾಲ್ಲೂಕಿಗೆ ಸೇನೆಯ ಕೇಂದ್ರ ಸ್ಥಾನವಿದ್ದಂತೆ. ಅಲ್ಲಿ ನಿಗಾ ವಹಿಸಿದರೆ ಎಲ್ಲ ಕಡೆಯೂ ನಿಗಾ ವಹಿಸಿದಂತೆಯೇ ಲೆಕ್ಕ. ಹೀಗಾಗಿ, ನಾನು ಮತಗಟ್ಟೆ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತೇನೆ’ ಎಂದು ಸತೀಶ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT