ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೋರ್ಲಾ ಘಾಟ್‌ನಲ್ಲಿ ಭೂಕುಸಿತ: ಕರ್ನಾಟಕ– ಗೋವಾ ಸಂಚಾರ ಸ್ಥಗಿತ

Last Updated 23 ಜುಲೈ 2021, 7:03 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಗುರುವಾರ ಇಡೀ ರಾತ್ರಿ ಮಳೆ ಮುಂದುವರಿದ ಪರಿಣಾಮ ಚೋರ್ಲಾ ಘಾಟ್‌ನಲ್ಲಿ ಭೂ ಕುಸಿತ ಉಂಟಾಗಿದೆ.

ಬೆಳಗಾವಿ– ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತದ ಕಾರಣ ಕರ್ನಾಟಕ-ಗೋವಾ ನಡುವೆ ಸಂಚಾರ ಸ್ಥಗಿತಗೊಂಡಿದೆ. ಕಣಕುಂಬಿ ಮಾವುಲಿ ದೇವಾಲಯದ ಬಳಿ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಖಾನಾಪುರ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ರಸ್ತೆ ಮತ್ತು ಸೇತುವೆಗಳು ಮುಳುಗಿವೆ. ಖಾನಾಪುರ ಪಟ್ಟಣದ ಬೆಳಗಾವಿ– ಪಣಜಿ ಹೆದ್ದಾರಿ ಮೇಲಿನ ಸೇತುವೆ ಮೇಲೆ ನಾಲ್ಕೈದು ಅಡಿಗಳಷ್ಟು ನೀರು ಹರಿಯುತ್ತಿದೆ. ಲೋಂಡಾ, ರುಮೇವಾಡಿ ಮತ್ತು ಖಾನಾಪುರ ಪಟ್ಡಣದ ಜನವಸತಿ ಪ್ರದೇಶಗಳಲ್ಲಿ ನೀರು ಹೊಕ್ಕಿದೆ.

ಕಣಕುಂಬಿಯಲ್ಲಿ 52 ಸೆಂ.ಮೀ. ದಾಖಲೆಯ ಮಳೆಯಾಗಿದೆ.

ಖಾನಾಪುರ ತಾಲ್ಲೂಕಿನ ಹಬ್ಬಾನಟ್ಟಿ ಹೊರವಲಯದ ಮಲಪ್ರಭಾ ನದಿ ದಡದಲ್ಲಿರುವ ಆಂಜನೇಯ ದೇವಸ್ಥಾನ ಮುಳುಗಿದೆ.

ಪ್ರಮಾಣ ಹೆಚ್ಚಳ: ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಕ್ಷಣ ಕ್ಷಣಕ್ಕೂ ಮಲಪ್ರಭೆಯಲ್ಲಿ ನೀರು ಏರುತ್ತಿದ್ದು ಬೆಳಗಾವಿಯ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿಯ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರ ಪಕ್ಕದ ಸರ್ವಿಸ್ ರಸ್ತೆಯ ಹಳೆಯ ಸೇತುವೆ ಮುಳುಗಡೆಯಾಗಿದೆ. ನದಿ ತೀರದ ಹೊಲ-ಗದ್ದೆಗಳು ಜಲಾವೃತಗೊಂಡಿವೆ. ನದಿ ತೀರದ ನಿವಾಸಿಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ.

ಶರಣೆ ಗಂಗಾಂಬಿಕಾ ಐಕ್ಯಮಂಟಪದ ಸುತ್ತಲೂ ನದಿ ನೀರು ಸುತ್ತುವರಿದಿದೆ. ಅಶ್ವತ್ಥ-ಲಕ್ಷ್ಮೀನರಸಿಂಹ ದೇವಸ್ಥಾನಕ್ಕೂ ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ. ನದಿ ತೀರದ ಜನರು ಸ್ಥಳಾಂತರಗೊಳ್ಳುವಂತೆ ಕಂದಾಯ ಇಲಾಖೆಯಿಂದ ತಿಳಿಸಲಾಗಿದೆ.

ಮಳೆ ಅಬ್ಬರದಿಂದಾಗಿ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಎಂ.ಕೆ. ಹುಬ್ಬಳ್ಳಿ-ಅಮರಾಪೂರ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಎಂ.ಕೆ. ಹುಬ್ಬಳ್ಳಿ-ಖಾನಾಪುರ ರಸ್ತೆಯ ಸೇತುವೆ ಬಳಿಯ ಹಳ್ಳದ ನೀರು ನುಗ್ಗಿದೆ.

ಮನೆಗಳ ಗೋಡೆ ಕುಸಿತ
ಬೆಳಗಾವಿ:
ಸತತ ಮಳೆಯಿಂದಾಗಿ ಶಿವಾಜಿನಗರ 5ನೇ ಮುಖ್ಯರಸ್ತೆಯಲ್ಲಿ ಹಲವು ಮನೆಗಳ ಗೋಡೆಗಳು ಕುಸಿದಿವೆ.

ರಾಮಚಂದ್ರ ವಿ. ಚೌಗುಲೆ, ರಾಜೇಂದ್ರ ನಿಲಜಕರ, ಸುನೀಲ್ ಜಿ. ನಿಲಜಕರ ಅವರ ಮನೆಗಳ ಗೋಡೆಗಳು ಬಿದ್ದಿವೆ. ಇದರಿಂದಾಗಿ, ಆ ಕುಟುಂಬದವರು ತೊಂದರೆಗೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT