ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ

Last Updated 11 ಸೆಪ್ಟೆಂಬರ್ 2022, 8:40 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ನಗರದಲ್ಲಿ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ರಾತ್ರಿಯಿಡೀ ನಿರಂತರ ಸುರಿಯಿತು.

ಚಿಕ್ಕೋಡಿ, ಖಾನಾಪುರ, ಸವದತ್ತಿ, ಬೈಲಹೊಂಗಲ, ಮೂಡಲಗಿ, ಹುಕ್ಕೇರಿ, ಬೆಳಗಾವಿ, ಗೋಕಾಕ ತಾಲ್ಲೂಕಿನ ಬಹುಪಾಲು ಕಡೆ ಮಳೆಯಾಗಿದೆ. ಸಂಕೇಶ್ವರ, ಎಂ.ಕೆ.ಹುಬ್ಬಳ್ಳಿ, ನೇಸರಗಿ, ಹಿರೇಬಾಗೇವಾಡಿ, ಕೌಜಲಗಿ, ಮುರಗೋಡ ಮುಂತಾದ ಹೋಬಳಿ ವ್ಯಪ್ತಿಯಲ್ಲೂ ಉತ್ತಮ ಮಳೆ ಬಿದ್ದಿದೆ.

ಹತ್ತು ದಿನಗಳ ಹಿಂದೆಯೇ ಸಂಪೂರ್ಣ ಭರ್ತಿಯಾಗಿರುವ ಮಲಪ್ರಭಾ ಅಣೆಕಟ್ಟೆಗೆ ಈಗಲೂ 2294 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಇಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತದೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣ ನದಿ ಹಾಗೂ ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾಗಳಲ್ಲೂ ನೀರಿನ ಮಟ್ಡ ಉಥಾಸ್ಥಿತಿ ಇದೆ, ಎಂದು ಮೂಲಗಳು ತಿಳಿಸಿವೆ.

ಘಟಪ್ರಭಾದ ರಾಜಾ ಲಖಮಗೌಡ ಅಣೆಕಟ್ಟೆಯಿಂದ 14 ಸಾವಿರ ಕ್ಯುಸೆಕ್, ವಿದ್ಯುತ್ ಉತ್ಪಾದನಾ ಘಟಕದಿಂದ 3 ಸಾವಿರ ಕ್ಯುಸೆಕ್ ಸೇರಿ ಒಟ್ಟು 17 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ನಿರಂತರ ಮಳೆ ಸುರಿಯುತ್ತಿರುವ ಕಾರಣ ಒಳಹರಿವು ಹೆಚ್ಚುತ್ತಿದೆ. ಹೀಗಾಗಿ ರಾತ್ರಿ ಹೊರ ಹರಿವನ್ನೂ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಣೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ಧಾರಾಕಾರ ಮಳೆ:ಮನೆ ಗೋಡೆ ಕುಸಿದು ಮಹಿಳೆ ಸಾವು

ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹೂಲಿಕಟ್ಟಿಯಲ್ಲಿ ಭಾನುವಾರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಗಂಗವ್ವ ರಾಮಣ್ಣ ಮೂಲಿಮನಿ (55) ಮೃತಪಟ್ಟವರು. ಶನಿವಾರ ರಾತ್ರಿ ಊರಿನಲ್ಲಿ ಧಾರಾಕಾರ ಮಳೆ ಸುರಿಯಿತು. ಇದರಿಂದಾಗಿ ಭಾನುವಾರ ನಸುಕಿನ 4ರ ಸುಮಾರಿಗೆ ಮಹಿಳೆ ಮಲಗಿದ್ದ ವೇಳೆ ಮನೆಯ ಗೋಡೆ ಕುಸಿಯಿತು. ಮಣ್ಣು, ಕಲ್ಲಿನ ಅವಶೇಷಗಳಡಿ ಸಿಲುಕಿದ್ದ ಮಹಿಳೆಯನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಯಿತು. ಮಧ್ಯಾಹ್ನ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT