ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಧಾರಾಕಾರ ಮಳೆ: ಮೈದುಂಬಿದ ದೂಧಗಂಗಾ, ವೇದಗಂಗಾ

Last Updated 6 ಜುಲೈ 2022, 8:28 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಾಲ್ಲೂಕಿನಲ್ಲಿ ಹರಿದ ದೂಧಗಂಗಾ ಹಾಗೂ ವೇದಗಂಗಾ ಉಪ ನದಿಗಳು ಮೈದುಂಬಿ ಹರಿಯುತ್ತಿದೆ.

ರಾಜ್ಯದ ಗಡಿ ಗ್ರಾಮವಾದ ಮಲಿಕವಾಡ ಮತ್ತು ಮಹಾರಾಷ್ಟ್ರದ ದತ್ತವಾಡ ಮಧ್ಯೆ ವೇದಗಂಗಾ ನದಿಗೆ ಕಿರು ಸೇತುವೆ ಕಟ್ಟಲಾಗಿದ್ದು, ಈ ಸೇತುವೆ ಮೇಲೆ ನೀರು ಬರಲು ಇನ್ನು ಒಂದು ಅಡಿ ಮಾತ್ರ ಬಾಕಿ ಇದೆ.

ದಕ್ಷಿಣ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆ ಹೆಚ್ಚಾದಷ್ಟು ರಾಜ್ಯಕ್ಕೆ ಹರಿದುಬರುವ ನೀರಿನ ಪ್ರಮಾಣವೂ ಹೆಚ್ಚುತ್ತದೆ. ಹೀಗಾಗಿ, ಕೃಷ್ಣಾ ನದಿಯ ಉಪ ನದಿಗಳಾದ ವೇದಗಂಗಾ, ದೂಧಗಂಗಾ ಭೋರ್ಗರೆಯುತ್ತಿವೆ.

ಬುಧವಾರ ಬೆಳಿಗ್ಗೆಯಿಂದ ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ತುಸು ತಗ್ಗಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿಯೂ ಕಳೆದ ಎರಡು ದಿನ ಬಿರುಸು ಪಡೆದಿದ್ದ ವರುಣ ಈಗ ಆರ್ಭಟ ನಿಲ್ಲಿಸಿದ್ದಾನೆ. ಹೀಗಾಗಿ, ನದಿಗಳ ನೀರಿನ ಮಟ್ಟ ಸದ್ಯಕ್ಕೆ ಸ್ಥಿರವಾಗಿದೆ. ಆದರೂ ನದಿ ತೀರದ ಗ್ರಾಮಗಳಿಗೆ ಈಗಾಗಲೇ ಮುನ್ಸೂಚನೆ ನೀಡಲಾಗಿದೆ. ಉಕ್ಕಿ ಹರಿಯುವ ಸಂದರ್ಭದಲ್ಲಿ ನದಿ ತೀರಕ್ಕೆ ಹಾಗೂ ಸೇತುವೆಗಳ ಮೇಲೆ ಚಲನ– ವಲನ ನಿರ್ಬಂಧಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲಿ, ಎಷ್ಟು ಮಳೆ?:ವೇದಗಂಗಾ ಹಾಗೂ ದೂಧಗಂಗಾ ನದಿ ತೀರಕ್ಕೆ ಹೊಂದಿಕೊಂಡ ನಿಪ್ಪಾಣಿ ನಗರ– 50.6 ಮಿ.ಮೀ, ಚಿಕ್ಕೋಡಿ 34.6 ಮಿ.ಮೀ, ನಾಗರ ಮುನ್ನೋಳಿ 26.2 ಮಿ.ಮೀ, ಜೋಡಟ್ಟಿ 25.4 ಮಿ.ಮೀ, ಸದಲಗಾ 17.8 ಮಿ.ಮೀ, ಅಂಕಲಿ 17.4 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ 27 ಸೇತುವೆ ಮುಳುಗಡೆ
ಮಹಾರಾಷ್ಟ್ರದ ಕೊಲ್ಲಾಪುರ ಸುತ್ತ ಹರಿದ ಪಂಚಗಂಗಾ ನದಿಯ ಒಳಹರಿವು ಎಥೇಚ್ಚವಾಗಿ ಏರುತ್ತಿದೆ. ಮುಂಜಾಗ್ರತಾ ಕ್ರಮವಾಗಿ, ಅಲ್ಲಿನ ರಾಧಾನಗರಿ ಜಲಾಶಯದಿಂದ 12 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ 27 ಕಿರು ಸೇತುವೆಗಳು ಬುಧವಾರ ಬೆಳಿಗ್ಗೆ ಮುಳುಗಡೆಯಾಗಿವೆ.

ಪಂಚಗಂಗಾ ನದಿಗೆ ಬಿಟ್ಟ ನೀರು ಮಹಾರಾಷ್ಟ್ರ– ಕರ್ನಾಟಕದ ಗಡಿ ಗ್ರಾಮವಾದ ನರಸಿಂಹವಾಡಿ ಎಂಬಲ್ಲಿ ಕೃಷ್ಣಾ ನದಿ ಸೇರುತ್ತದೆ. ಹೀಗಾಗಿ, ಮುಂದಿನ 18 ತಾಸುಗಳಲ್ಲಿ ಪಂಚಗಂಗಾ ನದಿಯ ನೀರು ನೇರವಾಗಿ ಕೃಷ್ಣೆಯ ಒಡಲು ಸೇರುವ ಸಾಧ್ಯತೆ ಇದೆ. ಆದರೆ, ಸದ್ಯಕ್ಕೆ ಪ್ರವಾಹದ ಆತಂಕ ಇಲ್ಲ ಎಂದೂ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT