ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರಲ್ಲಿ ‘ಕವಳಿ’ ಹಣ್ಣಿನ ಸಂಭ್ರಮ

ಕೈಗಾರಿಕಾ ಪ್ರದೇಶದ ಮುಳ್ಳುಕಂಟಿಯೇ ಜನ್ಮಸ್ಥಳ
Last Updated 15 ಮೇ 2021, 19:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರು ಕೈಗಾರಿಕಾ ಪ್ರದೇಶದ ಬಳಿ ಕವಳಿ ಕಂಟಿಯಲ್ಲೀಗ ಕಾಯಿ ಮತ್ತು ಹಣ್ಣಿನ ಸಂಭ್ರಮ ಮನೆ ಮಾಡಿದೆ. ‘ಕವಳೀ ಹಣ್ಣರೋ...’ ಎಂದು ಕೂಗುತ್ತಾ ಮಾರುವ ಲಂಬಾಣಿ ಮಹಿಳೆಯೊಬ್ಬರು ಕೂಡ ಪಟ್ಟಣದಲ್ಲಿ ಕಂಡು ಬರುತ್ತಿದ್ದಾರೆ.

ಕವಳಿ ಕಾಯಿ ಅಥವಾ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?! ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಹಣ್ಣು ಇಷ್ಟಪಡುತ್ತಾರೆ. ತೀರಾ ಹುಳಿ ಇದ್ದರೆ ಮುಖ ಕಿವುಚಿಕೊಳ್ಳುತ್ತಾರೆ. ಹಣ್ಣುಗಳು ತುಂಬಾ ರುಚಿಕಟ್ಟಾಗಿಯೂ ಇರುತ್ತವೆ. ಕವಳಿ ಕಾಯಿ ಅಥವಾ ಹಣ್ಣು ಎಂದರೆ ಸಾಕು ಬಾಯಿಯಲ್ಲಿ ನೀರೂರಿಸುತ್ತದೆ. ಅದನ್ನು ಸವಿಯಲು ಮನಸ್ಸಾಗುತ್ತದೆ.

ಕೈಗಾರಿಕೆ ಪ್ರದೇಶದ ಸುತ್ತ ಹತ್ತಾರು ಕವಳಿ ಕಂಟಿಗಳು ಇನ್ನೂ ಜೀವಂತವಾಗಿವೆ. ಬೇಸಿಗೆ ಕಾಲದಲ್ಲಿ ಕಾಯಿ ಮತ್ತು ಹಣ್ಣಿನ ಸಡಗರ ಇಲ್ಲಿ ಕಂಡುಬರುತ್ತಿದೆ. ಕಾಯಿ ತಂದು ಉಪ್ಪಿನಕಾಯಿ ಹಾಕಿ ರೊಟ್ಟಿ ಜೊತೆಗೆ ಸವಿಯುತ್ತಾರೆ. ಹಣ್ಣುಗಳನ್ನು ತೊಳೆದು ಉಪ್ಪು ಹಾಕಿ ಬಾಯಿ ಚಪ್ಪರಿಸುತ್ತಾರೆ. ಋತುವಿನಲ್ಲೊಂದು ಹಣ್ಣುಗಳನ್ನು ಪ್ರಕೃತಿ ನಮಗೆ ನೀಡುತ್ತದೆ. ಅದನ್ನು ಸವಿಯುವ ಹಾಗೂ ಅವುಗಳ ಮಹತ್ವವನ್ನು ಅರಿಯುವ ಕೆಲಸವನ್ನು ನಾವು ಮಾಡಬೇಕಷ್ಟೆ. ತಂದು ಮಾರುವವರಿಂದ ಖರೀದಿಸಿ ರುಚಿ ನೋಡಬಹುದು.

ಜೀವನ ನಿರ್ವಹಣೆ:

ಲಂಬಾಣಿಗರು ಮತ್ತು ಕೊರವರ ಸಮಾಜದವರಲ್ಲಿ ಕೆಲವರು ಬೇಸಿಗೆ ಕಾಲದಲ್ಲಿ ಇದೇ ಹಣ್ಣುಗಳನ್ನು ಮಾರಿ ಜೀವನ ನಿರ್ವಹಣೆ ಮಾಡುವವರೂ ಇದ್ದಾರೆ. ಬಸ್ ನಿಲ್ದಾಣಗಳಲ್ಲಿ ಮುತ್ತುಗದ ಎಲೆಯಲ್ಲಿ ಹಾಕಿ ಮಾರುತ್ತಿದ್ದರು. ಕೋವಿಡ್ ಲಾಕ್‌ಡೌನ್‌ಗಿಂತಲೂ ಮೊದಲು ಬೀದಿಗಳಲ್ಲಿ ಕೂಗುತ್ತ ಈ ಹಣ್ಣು ಮಾರುವುದು ಕಂಡು ಬರುತ್ತಿತ್ತು. ಕೋವಿಡ್ ಕಾಲದಲ್ಲಿ ಬಸ್ ಓಡಾಟವೂ ನಿಂತಿದೆ. ಬೆಳಿಗ್ಗೆ 10ರ ನಂತರ ಸಂಚರಿಸುವಂತೆಯೂ ಇಲ್ಲ. ಹೀಗಾಗಿ ಕವಳಿ ಹಣ್ಣು ತಂದು ಮಾರುವವರಿಗೂ ಕೊರೊನಾ ಸಂಕಷ್ಟ ತಂದೊಡ್ಡಿದೆ.

ರೋಗ ನಿರೋಧಕ:

‘ಕವಳಿ ಹಣ್ಣಿನಲ್ಲಿ ವಿಟಮಿನ್ ‘ಸಿ’ ಮತ್ತು ‘ಬಿ’ ಕಾಂಪ್ಲೆಕ್ಸ್ ಇರುತ್ತದೆ. ಮೇಲ್ಭಾಗದ ಹಣ್ಣಿನ ಕರಿ ಬಣ್ಣದ ಪದರಿನಲ್ಲಿ ಕಬ್ಬಿಣ ಅಂಶವೂ ಇರುತ್ತದೆ. ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ’ ಎಂದು ಆ ಹಣ್ಣಿನ ಮಹತ್ವವನ್ನು ಕಟ್ಟಿಕೊಟ್ಟರು ಡಾ.ಮಹಾಂತೇಶ ಕಲ್ಮಠ.

‘ದಿನಕ್ಕೆ ಐದಾರು ಹಣ್ಣುಗಳ ಸೇವನೆಯಿಂದ ತೊಂದರೆ ಇರುವುದಿಲ್ಲ. ಹೆಚ್ಚು ಸೇವಿಸಿದರೆ ಪಿತ್ತ ಆಗುವ ಅಪಾಯವೂ ಇರುತ್ತದೆ’ ಎಂಬ ಸಲಹೆ ರೂಪದ ಎಚ್ಚರಿಕೆಯನ್ನೂ ಅವರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT