ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗಿನಿಂದ ಬಂದವರ ಮೇಲೆ ನಿಗಾ ವಹಿಸಿ

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಸೂಚನೆ
Last Updated 30 ಮಾರ್ಚ್ 2020, 12:51 IST
ಅಕ್ಷರ ಗಾತ್ರ

ಸವದತ್ತಿ: ‘ಕೊರೊನಾ ವೈರಾಣು ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹೊರಗಿನಿಂದ ಬಂದವರ ಮೇಲೆ ನಿಗಾ ವಹಿಸಬೇಕು’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಯಾರಲ್ಲಾದರೂ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಅವರನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಬೇಕು’ ಎಂದರು.

‘ತಾಲ್ಲೂಕಿನ ಶಿವಾಪೂರಕ್ಕೆ ಹುಬ್ಬಳ್ಳಿ, ಪುಣೆ, ಅಂಡಮಾನ್‌–ನಿಕೋಬಾರ್‌ ಕಡೆಯಿಂದ 43 ಮಂದಿ ಬಂದಿದ್ದಾರೆ. ಭಂಡಾರಹಳ್ಳಿಗೆ ನಾಲ್ವರು ಬೇರೆ ಕಡೆಗಳಿಂದ ಬಂದಿದ್ದಾರೆ. ತಾಲ್ಲೂಕಿನ ಮಾಡಮಗೇರಿಗೆ ಇಬ್ಬರು ಶಂಕಿತರು ಬೇರೆಡೆಯಿಂದ ಬಂದಿದ್ದಾರೆ. ಮುದ್ರೆ ಹಾಕಿ ಹೊರ ಹೋಗದಂತೆ ತಿಳಿಸಿದರೂ ಕೇಳುತ್ತಿಲ್ಲ. ಊರೆಲ್ಲ ಸುತ್ತಾಡಿ ಉಡಾಫೆ ಉತ್ತರ ನೀಡುತ್ತಾರೆ’ ಎಂದು ಎಇಇ ಎಸ್.ಕೆ. ಪಾಟೀಲ ತಿಳಿಸಿದರು.

ಪ್ರತಿಕ್ರಿಯಿಸಿದ ಮಾಮನಿ, ‘ಅಂಥವರನ್ನು ಕ್ವಾರೆಂಟೈನ್‌ ಮಾಡಿ. ಕೇಳದಿದ್ದಲ್ಲಿ ಬಂಧಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ’ ಎಂದು ಸೂಚಿಸಿದರು.

‘ತುರ್ತು ಸೇವೆಗೆ ಹುಬ್ಬಳ್ಳಿ ಬದಲು ಬೆಳಗಾವಿ ಆಸ್ಪತ್ರೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಕಲ್ಪಿಸಿ. ಬೇಸಿಗೆ ಆರಂಭವಾದ್ದರಿಂದ ಜಾನುವಾರುಗಳ ಔಷಧಿಗಳನ್ನು ಈಗಲೇ ಸಂಗ್ರಹಿಸಿ. ಮೊರಾರ್ಜಿ ಶಾಲೆಯಲ್ಲಿ ಕ್ವಾರೆಂಟೈನ್‌ನಲ್ಲಿರುವವರಿಗೆ ಸಮಯಕ್ಕೆ ಸರಿಯಾಗಿ ಊಟ ಲಭಿಸುತ್ತಿಲ್ಲ. ಇತ್ತ ಗಮನಹರಿಸಬೇಕು’ ಎಂದು ತಿಳಿಸಿದರು.

ನರೇಗಾ ಸಹಾಯಕ ಅಧಿಕಾರಿ ಸಂಗನಗೌಡ ಹಂದ್ರಾಳ, ‘ಸಿಂಧೋಗಿ ಗ್ರಾಮದ ದೇವಸ್ಥಾನದಲ್ಲಿ ಸಾರ್ವಜನಿಕರೆಲ್ಲ ಸೇರಿ ಟಿವಿ ವೀಕ್ಷಿಸುತ್ತಿರುತ್ತಾರೆ. ಹಲವು ಬಾರಿ ಮನವಿ ಮಾಡಿದರೂ ಕೇಳುತಿಲ್ಲ. ಗುಂಪು ಸೇರುವುದನ್ನು ಬಿಡುತ್ತಿಲ್ಲ’ ಎಂದು ತಿಳಿಸಿದರು.

‘ಇದು ತಪ್ಪು. ಲಾಕ್ ಡೌನ್ ಉದ್ದೇಶ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿದೆ. ಇನ್ನೊಂದು ಬಾರಿ ಎಚ್ಚರಿಕೆ ಕೊಡಿ. ಇಲ್ಲವಾದರೆ ಟಿವಿ ತೆಗೆದುಕೊಂಡು ಬನ್ನಿ ಹಾಗೂ ಕಠಿಣ ಕ್ರಮ ವಹಿಸಿ. ಯಡ್ರಾಂವಿ, ಬೆಡಸೂರಗಳಲ್ಲಿ ಕಟ್ಟೆಯಲ್ಲಿ ಜನರು ಕುಳಿತಿರುತ್ತಾರೆ. ಕಟ್ಟೆ ಮೇಲೆ ಎಣ್ಣೆ ಸುರಿದು ಜನ ಕೂರಲಾಗದಂತೆ ಮಾಡಿ’ ಎಂದು ಮಾಮನಿ ತಿಳಿಸಿದರು.

ತಹಶೀಲ್ದಾರ್‌ ಪ್ರಶಾಂತ ಪಾಟೀಲ, ತಾಲ್ಲೂಕು ಪಂಚಾಯಿತಿ ಇಒ ಯಶವಂತಕುಮಾರ, ಆರೋಗ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ, ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್ಐ ನಾಗನಡೌಡ ಕಟ್ಟಿಮನಿ, ಎಸ್.ಕೆ. ಪಾಟೀಲ, ಸಿಡಿಪಿಒ ಕಾಂಚನಾ ಅಮಠೆ, ಎಂ.ಎನ್. ಮಠದ, ಕೆ.ಐ. ನಾಗನೂರ, ರಾಮು ಆರೆಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT