ಕೆಂಪೇಗೌಡ ದೂರದೃಷ್ಟಿಯ ಆಡಳಿತ ಅನುಕರಣೀಯ

7
ಬೆಳಗಾವಿ ಜಿಲ್ಲಾಡಳಿತದಿಂದ ನಾಡಪ್ರಭು ಜಯಂತಿ ಸಮಾರಂಭ

ಕೆಂಪೇಗೌಡ ದೂರದೃಷ್ಟಿಯ ಆಡಳಿತ ಅನುಕರಣೀಯ

Published:
Updated:
ಬೆಳಗಾವಿಯಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ, ಶಾಸಕ ಅನಿಲ ಬೆನಕೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಸಾಹಿತಿ ಕೆ.ಎಸ್. ಕೌಜಗಲಿ ಪುಷ್ಪನಮನ ಸಲ್ಲಿಸಿದರು

ಬೆಳಗಾವಿ: ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿ, ನಿಷ್ಠೆ, ಪರಾಕ್ರಮ ಹಾಗೂ ವೈಜ್ಞಾನಿಕ ಆಲೋಚನೆಯನ್ನು ಹೊಂದಿದ್ದ ಉತ್ತಮ ಮತ್ತು ಮಾದರಿ ಆಡಳಿಗಾರರಾಗಿದ್ದರು ಎಂದು ಸಾಹಿತಿ ಕೆ.ಎಸ್. ಕೌಜಲಗಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಪಾಲಿಕೆ ವತಿಯಿಂದ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‌‘ರಾಜಧಾನಿ ನಿರ್ಮಿಸಲು ಇಂದಿನ ಬೆಂಗಳೂರು ಪ್ರಶಸ್ತ ಸ್ಥಳವೆಂದು ಅಂದೇ ಯೋಚಿಸಿದ್ದರು. ಅದೇ ರೀತಿ ಆ ಪ್ರದೇಶದಲ್ಲಿ ರಾಜಧಾನಿ ಕಟ್ಟಿದರು. ಬೆಂಗಳೂರು ಇಂದು ಜಾಗತಿಕ ಮಟ್ಟದ ನಗರವಾಗಿ ಬೆಳೆದಿರುವುದನ್ನು ನೋಡಿದರೆ ಆ ನಾಯಕನ ದೂರದೃಷ್ಟಿ ನಮಗೆ ಅರ್ಥವಾಗುತ್ತದೆ’ ಎಂದು ಹೇಳಿದರು.

ಪರಾಕ್ರಮಿಯಾಗಿದ್ದರು:

‘ಕನ್ನಡ ನಾಡು ಪರಾಕ್ರಮಿಗಳಿಗಳನ್ನು ಹೊಂದಿರುವ ಬೀಡು. ಕೆಂಪೇಗೌಡ ಕೂಡ ಮಹಾಪರಾಕ್ರಮಿಯಾಗಿದ್ದರು. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಅವರೊಂದಿಗೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದರು. ಅನೇಕ ಕೆರೆಗಳನ್ನು ನಿರ್ಮಿಸಿದರು. ರಸ್ತೆಗಳನ್ನು ಅಭಿವೃದ್ಧಿಪಡಿಸಿದರು. ರಸ್ತೆಗಳ ಪಕ್ಕದಲ್ಲಿ ಗಿಡಗಳನ್ನು ಹಾಕಿಸಿದ್ದರು. ಶಿಕ್ಷಣ ಪ್ರೇಮಿಯಾಗಿದ್ದ ಅವರು ಅಗ್ರಹಾರಗಳನ್ನು ನಿರ್ಮಿಸಿದರು. ಪ್ರತಿ ಕಸುಬುದಾರರಿಗೆ ಒಂದೊಂದು ಪೇಟೆಯನ್ನು ಮಾಡಿಕೊಟ್ಟಿದ್ದರು. ಬೆಂಗಳೂರಿನಲ್ಲಿ ಆ ಪೇಟೆಗಳು ಇಂದಿಗೂ ಖ್ಯಾತಿ ಗಳಿಸಿವೆ’ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ‘ಅವರ ಕಾಲದಲ್ಲಿ ನಿರ್ಮಿಸಿದ ಕಟ್ಟಡಗಳು ಇಂದಿಗೂ ಸದೃಢವಾಗಿವೆ. ಅವರ  ಕಾರ್ಯವೈಖರಿ ಎಲ್ಲರಿಗೂ ಮಾದರಿ. ಇಂತಹ ನಾಯಕರ ಇತಿಹಾಸವನ್ನು ವಿದ್ಯಾರ್ಥಿಗಳು, ಯುವಜನರು ತಿಳಿದುಕೊಳ್ಳಬೇಕು. ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಿರು ಪುಸ್ತಕ ಬಿಡುಗಡೆ:

ಮೋಹನ ಗುಂಡ್ಲೂರ ಅವರು ರಚಿಸಿದ, ಜಿಲ್ಲಾಡಳಿತದಿಂದ ಪ್ರಕಟಿಸಿರುವ ನಾಡಪ್ರಭು ಕೆಂಪೇಗೌಡ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ತಹಶೀಲ್ದಾರ್ ಮಂಜುಳಾ ನಾಯಕ ಇದ್ದರು.

ನೈನಾ ಗಿರಿಗೌಡರ ಹಾಗೂ ತಂಡದವರು ಸುಗಮ ಸಂಗೀತ ಹಾಗೂ ನಾಡಗೀತೆ ಪ್ರಸ್ತುತಪಡಿಸಿದರು. ರಾಯಬಾಗದ ಮಾಯಾ ನೃತ್ಯ ಅಕಾಡೆಮಿಯವರು ಕೆಂಪೇಗೌಡರ ಕುರಿತು ನೃತ್ಯರೂಪಕ ಪ್ರದರ್ಶಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !