ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಡಳಿತ ನಡೆಸುವವರಿಗೆ ಕೆಂಪೇಗೌಡ ಮಾದರಿ’

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ
Last Updated 27 ಜೂನ್ 2019, 15:41 IST
ಅಕ್ಷರ ಗಾತ್ರ

ಬೆಳಗಾವಿ: ‘ಒಂದು ರಾಜ್ಯ ಸುಸೂತ್ರವಾಗಿ ನಡೆಯಬೇಕಾದರೆ ಅಲ್ಲಿನ ಆಡಳಿತಾತ್ಮಕ ವ್ಯವಸ್ಥೆ ಸರಿಯಾಗಿರಬೇಕು’ ಎಂದು ಉತ್ತರ ವಲಯ ಐಜಿಪಿ ಎಚ್.ಜಿ. ರಾಘವೇಂದ್ರ ಸುಹಾಸ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಭೂಮಿಯಲ್ಲಿ ಹುಟ್ಟಿದ್ದಕ್ಕೆ ನಾವು ಹೆಮ್ಮ ಮತ್ತು ಗೌರವ ಪಡಬೇಕು. ಇಲ್ಲಿ ಸಾಮಾಜಿಕ, ಆಡಳಿತಾತ್ಮಕ, ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಸುಧಾರಣೆಗಳಾಗಿವೆ. ಹೀಗಾಗಿ, ಸುಧಾರಣೆಯ ಪಥದ ಮೇಲೆ ನಿಂತಿದೆ’ ಎಂದರು.

‘ಸರಿಯಾದ ಮಾರ್ಗದಲ್ಲಿ, ಉತ್ತಮ ಆಲೋಚನೆ, ವಿವೇಚನೆಯಿಂದ ನಡೆಯುವ ಜನರು ಇರುವಂತಹ ನಾಡನ್ನು ಕಟ್ಟುತ್ತೇನೆ ಎಂದು ಕೆಂಪೇಗೌಡರು ಹೇಳಿದ್ದರು’ ಎಂದು ಸ್ಮರಿಸಿದರು.

‘ಕಾನೂನು ರಚಿಸುವಲ್ಲಿ, ಆಡಳಿತ, ಸಾಹಿತ್ಯ, ವಿಜ್ಞಾನ, ಸಂಸ್ಕೃತಿ ವಿಷಯದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಇದು ನಾವು ಹೆಮ್ಮೆಪಡುವ ವಿಷಯವಾಗಿದೆ’ ಎಂದರು.

ಉಪನ್ಯಾಸ ನೀಡಿದ ಹುಬ್ಬಳ್ಳಿ ಕಾಡಸಿದ್ದೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ.ಎಸ್. ಕೌಜಲಗಿ, ‘ಕೆಂಪೇಗೌಡರು ಕರ್ನಾಟಕದ ವೀರಪರಂಪರೆಯ ಮುಕುಟವಾಗಿದ್ದಾರೆ’ ಎಂದು ಬಣ್ಣಿಸಿದರು.

‘ಒಕ್ಕಲಿಗ ಸಮಾಜದ ಕೇಂದ್ರ ಬಿಂದು ಆಗಿರುವ ಕೆಂಪೇಗೌಡರು ದೇಶದ ಆಡಳಿತ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎನ್ನುವುದಕ್ಕೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ನಮ್ಮ ಆಡಳಿತ ವರ್ಗದವರು, ಜನಪ್ರತಿನಿಧಿಗಳು, ಯುವತಿಯರು ಹಾಗೂ ಯುವಕರು ಇತಿಹಾಸವನ್ನು ತಿಳಿಯುವ ಅಗತ್ಯವಿದೆ. ಬೆಂಗಳೂರು ಎಂಬ ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವುದಕ್ಕೆ ನಾಂದಿ ಹಾಡಿದವರು ಕೆಂಪೇಗೌಡರು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಗರ ಪೊಲೀಸ್ ಆಯುಕ್ತ ಡಾ.ಬಿ.ಎಸ್. ಲೋಕೇಶಕುಮಾರ್ ಮಾತನಾಡಿ, ‘ಕೆಂಪೇಗೌಡರು ಕಟ್ಟಿದ ಬೆಂಗಳೂರು ಪ್ರತಿ ಯುವಕ ಮತ್ತು ಯುವತಿಯರಿಗೆ ಆಶಾಗೋಪುರವಾಗಿದೆ. ಚೆನ್ನಾಗಿ ಓದಿ ವೈದ್ಯ, ವಕೀಲ, ಎಂಜಿನಿಯರ್‌ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿರುವ ಬೆಂಗಳೂರು ಈ ಮಟ್ಟದ ಬೆಳವಣಿಗೆ ಹೊಂದಲು ಕಾರಣೀಭೂತರಾದವರು ನಾಡಪ್ರಭು’ ಎಂದು ಹೇಳಿದರು.

‘ಅವರು ದೂರದೃಷ್ಟಿ ಇಟ್ಟುಕೊಂಡು ಈ ನಾಡಿಗೆ ಉತ್ತಮ ನಗರದ ಅವಶ್ಯಕತೆ ಇದೆ ಕಟ್ಟಿದ ನಗರವೇ ಬೆಂಗಳೂರು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಮ್ ನಸಲಾಪುರೆ, ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನ್ನವರ, ತಹಶೀಲ್ದಾರ್ ಮಂಜುಳಾ ನಾಯಕ, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಗಂಗಾಧರ, ಲೇಖಕ ಮೋಹನ ಗೂಂಡ್ಲೂರ, ವಿಜಯಾ ಹೀರೆಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಬಿ. ರಂಗಯ್ಯ ಇದ್ದರು.

ಶಿಕ್ಷಕ ಎಸ್.ಪಿ. ಕಂಕಣವಾಡಿ ನಿರೂಪಿಸಿದರು.ಕಾರ್ಯಕ್ರಮಕ್ಕೆ ಜನ‍ಪ್ರತಿನಿಧಿಗಳು ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT