ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಪಾಟೀಲ ಶೀಘ್ರವೇ ಬಿಜೆಪಿಗೆ: ರಮೇಶ ಜಾರಕಿಹೊಳಿ

Last Updated 1 ನವೆಂಬರ್ 2020, 5:50 IST
ಅಕ್ಷರ ಗಾತ್ರ

ಬೆಳಗಾವಿ: ‘ಪಕ್ಷೇತರವಾಗಿ ಗೆದ್ದಿದ್ದ ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ ಈಗ ಎಂಇಎಸ್‌ (ಮಹಾರಾಷ್ಟ್ರ ಏಕೀಕರಣ ಸಮಿತಿ) ಜೊತೆ ಗುರುತಿಸಿಕೊಂಡಿಲ್ಲ. ಅವರನ್ನು ಶೀಘ್ರವೇ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಇಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಸ್ಪರ್ಧೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಂಬಲವಾಗಿ ನಿಂತಿಲ್ಲ’ ಎಂದರು.

‘ಎಂಇಎಸ್‌ ಜೊತೆ ಗುರುತಿಸಿಕೊಂಡು ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಅರವಿಂದ ಪಾಟೀಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಸರಿಯೇ’ ಎಂಬ ಪ್ರಶ್ನೆಗೆ, ‘ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಈಗ ಬಿಜೆಪಿಯಲ್ಲಿದ್ದೇನೆ. ಬಿಜೆಪಿ ಸಿದ್ಧಾಂತ ಪಾಲಿಸುತ್ತಿದ್ದೇನೆ. ಅವರೂ ಅಳವಡಿಸಿಕೊಳ್ಳುತ್ತಾರೆ’ ಎಂದರು.

‘ಎಂಇಎಸ್ ಕರಾಳ ದಿನಾಚರಣೆ ಬೆಂಬಲಿಸಿ ಕಪ್ಪುಪಟ್ಟ ಧರಿಸಿ ಕಾರ್ಯನಿರ್ವಹಿಸುತ್ತೇವೆ’ ಎಂಬ ಮಹಾರಾಷ್ಟ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅಂತಹ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಒತ್ತು ಕೊಟ್ಟು ದೊಡ್ಡದು ಮಾಡಬಾರದು. ಶಿವಸೇನೆ ಸೇರಿದಂತೆ ಕೆಲವೊಂದು ಸಂಘಟನೆಗಳ ಕಾರ್ಯಸೂಚಿಯೇ ಕರ್ನಾಟಕದ ವಿರುದ್ಧ ಇರುವುದಾಗಿದೆ. ಅವರ ರಾಜ್ಯದ ಬಗ್ಗೆ ಅವರು ಮಾತನಾಡುತ್ತಾರೆ. ನಮ್ಮ ರಾಜ್ಯದ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದರು.

‘ಎಂಇಎಸ್‌ನವರು ಪ್ರತಿಭಟನೆ ನಡೆಸುತ್ತಾರೆ, ಹೋಗುತ್ತಾರೆ. ಅದಕ್ಕೆಲ್ಲ ಮಹತ್ವ ಕೊಡಬಾರದು. ಕನ್ನಡಿಗರ ಹಿತ ಬಲಿ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಮಹಾದಾಯಿ ವಿಚಾರವಾಗಿ ಗೋವಾ ನಿರ್ಧಾರಕ್ಕೆ ಬದ್ಧ’ ಎಂದು ಕಾಂಗ್ರೆಸ್ ಮುಖಂಡ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷದವರು ನಿಲುವನ್ನು ಸ್ಪಷ್ಟಪಡಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT