ಶನಿವಾರ, ಫೆಬ್ರವರಿ 27, 2021
31 °C
ಅಪಹರಣಕ್ಕೆ ಒಳಗಾಗಿದ್ದ ಅಣ್ಣಾಸಾಹೇಬ ರಕ್ಷಣೆ

ಬೆಳಗಾವಿ | ಜಮೀನು ಕಬಳಿಸಲು ವ್ಯಕ್ತಿ ಅಪಹರಣ, 9 ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವ್ಯಕ್ತಿಯನ್ನು ಅಪಹರಿಸಿ ತಮ್ಮ ಬಂಧನದಲ್ಲಿಟ್ಟುಕೊಂಡು, ಅವರಿಂದ ಆಸ್ತಿ ಹಾಗೂ ಹಣ ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಒಂಬತ್ತು ಮಂದಿಯನ್ನು ಇಲ್ಲಿನ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಪಹರಣಕ್ಕೆ ಒಳಗಾಗಿದ್ದ ಬಾಂದೂರ ಗಲ್ಲಿಯ ನಿವಾಸಿ ಅಣ್ಣಾಸಾಹೇಬ ಶ್ರೀಕಾಂತ ಚೌಗುಲೆ (48) ಅವರನ್ನು ರಕ್ಷಿಸಿದ್ದಾರೆ.

ಇಲ್ಲಿನ ಮಹಾದ್ವಾರ ರಸ್ತೆಯ ನಿವಾಸಿ ವಿನಾಯಕ ಶಂಕರ ಪ್ರಧಾನ, ಹೊಸ ಗಾಂಧಿನಗರದ ಶಿವನಾಥ ಅಲಿಯಾಸ್ ಪಿಂಟು ರಾನಬಾ ರೇಡೇಕರ, ಪುಲಬಾಗ್‌ ಗಲ್ಲಿಯ ಅಮಿತ ಯಲ್ಲಪ ಮಜಗಾಂವಿ, ಗಾಂಧಿನಗರದ ಮುರಾರಿ ಬಾಬಾಜಾನ ಖಾನಾಪುರಿ, ಅನಗೋಳದ ಸಂಜಯ ಪ್ರಕಾಶ ಕೌಜಲಗಿ ಅಲಿಯಾಸ್‌ ಭಜಂತ್ರಿ, ಮಾರುತಿ ನಗರದ ರಾಜು ಜ್ಞಾನೇಶ್ವರ ಗೋಣಿ, ರೈತ ಗಲ್ಲಿಯ ಅಮಿತ ಪರಶುರಾಮ ಧಾಮಣೇಕರ, ಬೆಳವಟ್ಟಿಯ ಚೇತನ ನಾರಾಯಣ ಪಾಟೀಲ ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್‌ ತಾಲ್ಲೂಕು ಹಡಲಗೆ ಗ್ರಾಮದ ಸುರೇಶ ಮಹಾದೇವ ಪಾಟೀಲ ಬಂಧಿತರು. ಅವರಿಂದ, ಅಪಹರಣಕ್ಕೆ ಬಳಸಿದ್ದ ಕಾರು, ಐದು ದ್ವಿಚಕ್ರವಾಹನಗಳು ಹಾಗೂ 11 ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ₹ 8 ಲಕ್ಷವಾಗಿದೆ.

ಅಣ್ಣಾಸಾಹೇಬ ಅವರು ನಾಪತ್ತೆಯಾಗಿದ್ದ ಬಗ್ಗೆ ಫೆ. 23ರಂದು ಮಾರ್ಕೆಟ್‌ ಠಾಣೆಗೆ ದೂರು ನೀಡಲಾಗಿತ್ತು. ಉಪಾಹಾರ ತರಲು ಹೋಗಿದ್ದ ಅವರನ್ನು ಅಪಹರಣಕಾರರು ಕಾರ್‌ನಲ್ಲಿ ಬಂದು ಅಪಹರಿಸಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಕಡಲಗೆ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

‘ಆರೋಪಿಗಳು, ಹಲಗಾ–ಹಿಂಡಲಗಾ–ಉಚಗಾಂವ ಮಾರ್ಗವಾಗಿ ಕಡಲಗೆ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಮರುದಿನ ಬೆಳವಟ್ಟಿ ಗ್ರಾಮದ ಚೇತನ ಪಾಟೀಲ ಎನ್ನುವವರ ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ 40 ದಿನಗಳವರೆಗೆ ಬಂಧಿಸಿಟ್ಟಿದ್ದರು. ನಂತರ ಕಡಲಗೆ ಗ್ರಾಮದಲ್ಲಿ ಒಂದು ತಿಂಗಳು ಬಂಧಿಸಿಟ್ಟಿದ್ದರು. ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ಬಿಡಿಸಿಕೊಡುವಂತೆ ಹಾಗೂ ಮೂರು ಎಕರೆ ಜಮೀನನ್ನು ಖರೀದಿಗೆ ಹಾಕುವಂತೆ ಪೀಡಿಸಿ ದಾಖಲಾತಿಗಳಿಗೆ ಸಹಿ ಹಾಕಿಸಲು ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಸೊಸೈಟಿಯೊಂದರ ಖಾತೆಯಲ್ಲಿದ್ದ ಠೇವಣಿ ಹಣ ವಿತ್‌ಡ್ರಾ ಸ್ಲಿಪ್‌ಗೆ ಸಹಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಸಿಪಿ ನಾರಾಯಣ ಭರಮನಿ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ, ಮಾರ್ಕೆಟ್‌ ಠಾಣೆ ಇನ್‌ಸ್ಪೆಕ್ಟರ್‌ ಸಂಗಮೇಶ ಶಿವಯೋಗಿ, ಪಿಎಸ್‌ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು