ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ಪ್ರಾಧಿಕಾರ: 5 ವರ್ವಗಳಿಂದ ನಡೆಯದ ಸಭೆ!

ಸ್ಥಳೀಯರಲ್ಲಿ ಅಸಮಾಧಾನ; ಕ್ರಮಕ್ಕೆ ಆಗ್ರಹ
Last Updated 17 ಡಿಸೆಂಬರ್ 2018, 6:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಕಿಡಿ ಹೊತ್ತಿಸಿದ ರಾಣಿ ಕಿತ್ತೂರು ಚನ್ನಮ್ಮ. ಈ ರಾಣಿಯ ಊರಿನ ಅಭಿವೃದ್ಧಿಗಾಗಿ ಸರ್ಕಾರ ಕಿತ್ತೂರು ಪ್ರಾಧಿಕಾರ ರಚನೆ ಮಾಡಿ ವರ್ಷಗಳೇ ಕಳೆದಿವೆ. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ತಾಣಗಳ ಸಮಗ್ರ ಅಭಿವೃದ್ಧಿಗಾಗಿ ರಚನೆಗೊಂಡಿರುವ ‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ’ದ ಸಭೆ ನಿಗದಿತ ಸಮಯಕ್ಕೆ ನಡೆಯದಿರುವುದು ಇಲ್ಲಿಯ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಪ್ರಾಧಿಕಾರ ರಚನೆಯಾಗಿ ಒಂದೂವರೆ ದಶಕವಾಗಿದೆ. ಅದಕ್ಕೆ ವಿಧೇಯಕದ ಸ್ವರೂಪ ಕೊಟ್ಟು 7 ವರ್ಷಗಳು ಕಳೆದಿವೆ. ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಯೇ ಅಧ್ಯಕ್ಷರಾಗಿರುತ್ತಾರೆ. ಆದರೆ, 5 ವರ್ಷಗಳಿಂದ ಸಭೆಯೇ ನಡೆದಿಲ್ಲ. ಈಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾದರೂ ಸಭೆ ಕರೆದು ಪರಿಶೀಲನೆ ನಡೆಸಬೇಕು’ ಎಂಬುದು ಇಲ್ಲಿನವರ ಒತ್ತಾಸೆಯಾಗಿದೆ.

‘ವಿಧೇಯಕ ಸ್ವರೂಪ ನೀಡಿದ ನಂತರ ಪ್ರತಿ ವರ್ಷ ₹ 1 ಕೋಟಿ ಹಣವನ್ನು ಈ ಸಂಸ್ಥಾನಕ್ಕೆ ಸಂಬಂಧಪಟ್ಟ ಸುಮಾರು 30 ತಾಣಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇಲ್ಲಿಯವರೆಗೆ ಬಿಡುಗಡೆಯಾದ ಹಣ ₹10 ಕೋಟಿ ದಾಟುತ್ತದೆ. ನೆನಪಿಡುವಂಥ ಮತ್ತು ಹೆಚ್ಚು ಕಾಲ ಬಾಳುವಂತಹ ಕಾಮಗಾರಿಗಳು ನಡೆದಿಲ್ಲ. ಚರಂಡಿ, ರಸ್ತೆ ನಿರ್ಮಾಣಕ್ಕೆ ಪ್ರಾಧಿಕಾರದ ದುಡ್ಡು ಹೆಚ್ಚು ವ್ಯಯವಾಗುತ್ತಿದೆ. ಇದೇ ಮಾದರಿ ಕೆಲಸವಾಗುತ್ತಾ ಸಾಗಿದರೆ ಐತಿಹಾಸಿಕ ತಾಣಗಳು ಎಂದು ಅಭಿವೃದ್ಧಿ ಆಗಬೇಕು?’ ಎಂದು ಸಂಜೀವ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಉತ್ಸವದಲ್ಲಿ ಮಾತ್ರ ನೆನಪು:

‘ಪ್ರತಿ ವರ್ಷ ಅ. 23ರಿಂದ 25ವರೆಗೆ ನಡೆಯುವ ಮೂರು ದಿನಗಳ ಕಿತ್ತೂರು ಉತ್ಸವದಲ್ಲಿ ರಾಣಿ ಚನ್ನಮ್ಮ ಮತ್ತು ಇಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಡಿ ಹೊಗಳಲಾಗುತ್ತದೆ. ಮುಂದಿನ ವರ್ಷದವರೆಗೂ ಇದರ ನೆನಪೇ, ಭಾಷಣ ಮಾಡಿದ ಸಚಿವ ಮತ್ತು ಶಾಸಕರಿಗೆ ಇರುವುದಿಲ್ಲ’ ಎಂದು ಮುಖಂಡ ಕಲ್ಲಪ್ಪ ಮೇಟ್ಯಾಲ್ ಎಂದು ಆರೋಪಿಸಿದರು.

‘ಕೋಟೆಯ ಒಳಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಕಾಮಗಾರಿಗಳ ಸ್ವರೂಪವನ್ನು ಈಗ ನೋಡಬೇಕು. ಮಾಡಿದ ಕಡೆಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಕಸ ಬೆಳೆದು ನಿಂತಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದ ಕನಸಿನ ಗುಲಾಬಿ ತೋಟ ಮಣ್ಣು ಪಾಲಾಯಿತು. ಸುತ್ತು ರಸ್ತೆಗೆ ಅಳವಡಿಸಲಾಗಿದ್ದ ಸೋಲಾರ್ ಬೀದಿದೀಪಗಳು ಸ್ಮಾರಕದೊಳಗೊಂದು ಸ್ಮಾರಕದ ರೂಪು ಪಡೆದುಕೊಂಡು ನಲುಗಿವೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪ್ರದರ್ಶನಕ್ಕೆ ಸಿದ್ಧಗೊಳಿಸಲಾಗಿದ್ದ ಧ್ವನಿ ಮತ್ತು ಬೆಳಕು ವ್ಯವಸ್ಥೆಗೆ ಈಗ ಧ್ವನಿಯೂ ಇಲ್ಲ; ಬೆಳಕು ಇಲ್ಲದಂತಾಗಿದೆ’ ಎಂದು ಅವರು ದುಃಸ್ಥಿತಿ ವಿವರಿಸಿದರು.

‘ಊರಿನ ಕೆಲ ಓಣಿಗಳ ರಸ್ತೆಗಳ ಪರಿಸ್ಥಿತಿ ಅಯೋಮಯವಾಗಿದೆ. ನಿವೃತ್ತರ ತಾಣವಾಗಿರುವ ವಿದ್ಯಾಗಿರಿ ಬಡಾವಣೆಯ ರಸ್ತೆಗಳು ತೀರಾ ಹೆದಗೆಟ್ಟು ಹೋಗಿವೆ. ಜಲ್ಲಿ ಕಲ್ಲುಗಳು ಮೇಲೆದ್ದು ಅಣಕಿಸುತ್ತಿವೆ. ಇಲ್ಲಿಯ ವಾಹನ ಸಂಚಾರವೇ ದುಸ್ತರವಾಗಿದೆ’ ಎನ್ನುತ್ತಾರೆ ಅವರು.

‘ಮುಖ್ಯ ಬಸ್ ನಿಲ್ದಾಣದಿಂದ ಬಳಿಗಾರ ಓಣಿ ರಸ್ತೆಮಾರ್ಗವೂ ಸರಿಯಾಗಿಲ್ಲ. ಅಲ್ಲಲ್ಲಿ ಮಾಡಿರುವ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತದೆ. ಈ ರಸ್ತೆ ಮೂಲಕ ಸಾಗುವುದಕ್ಕೆ ಹರಸಾಹಸಪಡಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದವರು ರುಕ್ಮವ್ವ ಬಂಗ್ಲೇದ್ ಅವರು.

ಪ್ಲ್ಯಾನ್ ರೂಪಿಸಿ:

‘ಸಮಗ್ರ ಪಟ್ಟಣ, ಕಿತ್ತೂರು ಕೋಟೆ ಮತ್ತು ಇದಕ್ಕೆ ಸಂಬಂಧಿಸಿದ ತಾಣಗಳ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸಬೇಕು. ಇದಕ್ಕೆ ಸರ್ಕಾರ ₹ 500 ಕೋಟಿ ಮೀಸಲಿಡಬೇಕು. ಹಂತ, ಹಂತವಾಗಿ ಹಣ ಬಿಡುಗಡೆ ಮಾಡಬೇಕು. ನಿಗದಿತ ಸಮಯಕ್ಕೆ ಪ್ರಾಧಿಕಾರದ ಸಭೆಯನ್ನು ಮುಖ್ಯಮಂತ್ರಿ ಕರೆದು ಪ್ರಗತಿ ಪರಿಶೀಲನೆ ನಡೆಸಬೇಕು’ ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಕಡೋಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT