ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು: ಕಲ್ಮಠದ ಮಹಾದ್ವಾರಕ್ಕೆ ಮಹಾತ್ಮರ ಮೆರುಗು

ಸಂಸ್ಥಾನ ಮಠಕ್ಕೆ ಸ್ವಾಮೀಜಿ ಹೊಸ ಕಳೆ ತಂದ ಸ್ವಾಮೀಜಿ
Last Updated 18 ಡಿಸೆಂಬರ್ 2021, 12:58 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಐದು ಶತಮಾನಗಳನ್ನು ಕಳೆದಿರುವ ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಮಹಾದ್ವಾರಕ್ಕೆ ಈಗಿನ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೊಸ ಕಳೆ ತಂದಿದ್ದಾರೆ. ಮಹಾತ್ಮರ ಪುತ್ಥಳಿಗಳನ್ನು ಮುಖ್ಯದ್ವಾರದ ಚೌಕಟ್ಟಿನ ಮೇಲೆ ಅನಾವರಣಗೊಳಿಸಿದ್ದರಿಂದ ಹೆಚ್ಚು ಆಕರ್ಷಣೀಯವಾಗಿ ಶ್ರೀಮಠ ಕಂಗೊಳಿಸುತ್ತಿದೆ.

ಕರ್ತೃ ಗದ್ದುಗೆ, ಆದಿಗುರು ಗುರುಸಿದ್ದೇಶ್ವರ ಪುತ್ಥಳಿ ಜೊತೆಗೆ ಹಿಂದೆ ಆಗಿ ಹೋಗಿರುವ ಪ್ರಖರ ಸನ್ಯಾಸಿ ಮಡಿವಾಳ ಸ್ವಾಮೀಜಿ, ಕ್ರಾಂತಿಯೋಗಿ ಜಗಜ್ಯೋತಿ ಬಸವೇಶ್ವರ ಹಾಗೂ ಕಿತ್ತೂರು ಸಂಸ್ಥಾನದ ಲಾಂಛನ ಮೊದಲಾದವು ನುರಿತ ಕಲಾವಿದರ ಕೈ ಚಳಕದಲ್ಲಿ ದ್ವಾರ ಬಾಗಿಲ ಮೇಲೆ ಅರಳಿ ನಿಂತಿವೆ.

ಇತಿಹಾಸ ಪ್ರಸಿದ್ಧ ಕಿತ್ತೂರು ಸಂಸ್ಥಾನದ ಲಾಂಛನ ಅನಾವರಣ ಮಾಡುವ ಮೂಲಕ ಗುರುಮನೆ ಮತ್ತು ಅರಮನೆಗಿದ್ದ ಅವಿನಾಭಾವ ಸಂಬಂಧದ ಪರಂಪರೆಯನ್ನು ಸ್ವಾಮೀಜಿಯವರು ವರ್ತಮಾನದಲ್ಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಶತಮಾನಗಳ ಪರಂಪರೆ

‘ಕಿತ್ತೂರು ಗುರು ಮನೆ ಮತ್ತು ಅರಮನೆಗೆ ಶತಮಾನಗಳ ಅವಿನಾಭಾವ ಸಂಬಂಧ ಇದೆ. ಕಿತ್ತೂರು ಸಂಸ್ಥಾನದ 5ನೇ ದೊರೆಯಾಗಿದ್ದ ಅಲ್ಲಪ್ಪಗೌಡ ದೇಸಾಯಿ ಕ್ರಿ.ಶ.1660ರಲ್ಲಿ ಚೌಕೀಮಠ ನಿರ್ಮಿಸಿ ಸಂಸ್ಥಾನದ ದೊರೆಗಳಿಗೆ ಗುರುಗಳಾಗಿದ್ದ ಸ್ವಾಮೀಜಿ ಅವರಿಗೆ ಭಕ್ತಿ-ಗೌರವ ಸಮರ್ಪಿಸಿದ. ಕಾಲಾನಂತರದಲ್ಲಿ ಅದು ದೊರೆಗಳ ಸಮಾಧಿ ಬಳಿ ಸ್ಥಳಾಂತರಗೊಂಡಿತು’ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ.

‘ಇದೇ ಅಲ್ಲಪ್ಪಗೌಡ ದೊರೆ ಕಿತ್ತೂರು ಅರಮನೆಯನ್ನೂ ನಿರ್ಮಿಸಿದ. ಸ್ವಾಮೀಜಿ ಅವರ ಮಾರ್ಗದರ್ಶನ ಮತ್ತು ಸಲಹೆ ಪಡೆದು ದೊರೆ ಪರಂಪರೆಯವರು ಸದಾಕಾಲ ಆಡಳಿತ ನಡೆಸುತ್ತಾ ಬಂದರು. ಚೌಕೀಮಠ ಸ್ವಲ್ಪ ದೂರವಾದದ್ದರಿಂದ ಅರಮನೆಗೆ ಸಮೀಪವಿರುವ ಸ್ಥಳದಲ್ಲಿ ಮತ್ತೊಂದು ಮಠ ಸ್ವಾಮೀಜಿಯವರಿಗಾಗಿ ನಿರ್ಮಾಣವಾಗಿರಬೇಕು. ಅದಕ್ಕೆ ಕಲ್ಮಠ ಎಂದು ಕರೆದರು’ ಎನ್ನುತ್ತಾರೆ ಅವರು.

ಗುರು ಪರಂಪರೆ ಅಬಾಧಿತ

ಕಿತ್ತೂರು ಸಂಸ್ಥಾನದ 5ನೇ ದೊರೆಯ ಕಾಲದಿಂದ ಬಂದಿರುವ ಗುರುಮನೆ ಮತ್ತು ಅರಮನೆ ಪರಂಪರೆ ಈಗಲೂ ಮುಂದುವರಿದಿದೆ. ಗುರು ಪರಂಪರೆಯ 13ನೇ ಉತ್ತರಾಧಿಕಾರಿಯಾಗಿ ಈಗಿನ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮುಂದುವರಿದಿದ್ದಾರೆ.

‘ಅವರು ಸಂಸ್ಥಾನ ಮಠಕ್ಕೆ ಪೀಠಾಧಿಪತಿಯಾಗಿ ಬಂದ ನಂತರ ಗುರುಮನೆಗೆ ಹೊಸ ಕಳೆಯೂ ಬಂತು. ಮಸುಕಾಗಿದ್ದ ಕಲ್ಲಿನ ಒಳಾಂಗಣಕ್ಕೆ ಹೊಸ ಮೆರುಗು ತಂದರು. ಬಸವಣ್ಣ ಮಡಿವಾಳ ಶಿವಯೋಗಿ, ಗುರುಸಿದ್ಧ ಶ್ರೀಗಳು ಮತ್ತು ರಾಣಿ ಚನ್ನಮ್ಮ ಪುತ್ಥಳಿಗಳು ಒಳಾಂಗಣದಲ್ಲಿ ಪ್ರತಿಷ್ಠಾಪನೆಗೊಂಡವು. ಇದರಿಂದ ಇಡೀ ಮಠದ ಕಳೆಯೇ ಬದಲಾಯಿತು’ ಎನ್ನುತ್ತಾರೆ ಭಕ್ತರು.

ಮುಖ್ಯ ದ್ವಾರದ ಮೇಲೂ ಈಗ ಮಡಿವಾಳ ಶಿವಯೋಗಿ, ಗುರುಸಿದ್ಧ ಶ್ರೀಗಳು, ಕರ್ತೃ ಗದ್ದುಗೆ ಮೂರ್ತಿ, ಬಸವಣ್ಣ ಮತ್ತು ಬಸವ ಚಿತ್ರ ಮಧ್ಯದಲ್ಲಿರುವ ಸಂಸ್ಥಾನ ಲಾಂಛನ ಅನಾವರಣಗೊಳಿಸಿರುವುದು ಆಕರ್ಷಿಸುತ್ತಿದೆ ಎಂದು ಭಕ್ತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT