ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕಿಂತಲೂ ಹೆಚ್ಚಿನ ಆರೋಗ್ಯ ಸೇವೆ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಕೋರೆ

Last Updated 13 ನವೆಂಬರ್ 2021, 10:59 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರಕ್ಕಿಂತಲೂ ಹೆಚ್ಚಿನ ಆರೋಗ್ಯ ಸೇವೆಯನ್ನು ಕೆಎಲ್ಇ ಸಂಸ್ಥೆ ಮೂಲಕ ನೀಡುತ್ತಿದ್ದೇವೆ. ದೂರದ ಹಳ್ಳಿಗಳಲ್ಲೂ ಶಿಬಿರಗಳನ್ನು ಆಯೋಜಿಸಿ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.

ಇಲ್ಲಿನ ನೆಹರೂ ನಗರದ ಜೆಎನ್‌ಎಂಸಿ ಆವರಣದಲ್ಲಿರುವ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆಎಲ್‌ಇ ಸಂಸ್ಥೆಯ 106ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜ ಮುಂದೆ ಬರಬೇಕಾದರೆ ಶಿಕ್ಷಣದೊಂದಿಗೆ ಆರೋಗ್ಯವೂ ಬಹಳ ಮುಖ್ಯ. ಹೀಗಾಗಿ, ಗುಣಾತ್ಮಕ ಶಿಕ್ಷಣ ಪ್ರಸಾರದೊಂದಿಗೆ ಆರೋಗ್ಯ ಸೇವೆ ಕಲ್ಪಿಸುವುದಕ್ಕೂ ಆದ್ಯತೆ ನೀಡಿದ್ದೇವೆ’ ಎಂದರು.

‘106 ವರ್ಷಗಳ ಹಿಂದೆ ಈ ಭಾಗ ಶಿಕ್ಷಣವಿಲ್ಲದೆ ಕತ್ತಲಲ್ಲಿತ್ತು. ನಗರದಲ್ಲಿ ಎರಡು ಶಾಲೆಗಳಷ್ಟೆ ಇದ್ದವು. ಜಮೀನ್ದಾರರು, ಸರದಾರರು, ಬ್ರಿಟಿಷರು ಅಥವಾ ಅಧಿಕಾರಿಗಳ ಮಕ್ಕಳಿಗೆ ಮಾತ್ರ ಶಾಲೆಗಳು ಸೀಮಿತವಾಗಿದ್ದವು. ಪರಿಣಾಮ, ಈ ಭಾಗ ಶಿಕ್ಷಣದಿಂದ ವಂಚಿತವಾಗಿತ್ತು. ಆಗ ಸಪ್ತರ್ಷಿಗಳು ಕೆಎಲ್ಇ ಸಂಸ್ಥೆ ಆರಂಭಿಸಿದರು. ಅವರನ್ನು ನಾವೆಲ್ಲರೂ ಸ್ಮರಿಸಬೇಕು. ಸಾಮಾನ್ಯ ಕುಟುಂಬದಿಂದ ಬಂದ ಅವರು, ಶಿಕ್ಷಣದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎನ್ನುವುದನ್ನು ಅರಿತು ಸೇವೆಗೆ ಮುಂದಾದರು. ಉದ್ಯೋಗಕ್ಕೆ ಹೋಗದೆ ಶಾಲೆ ಆರಂಭಿಸಿದರು; ತಾವೇ ಕಲಿಸಿದರು’ ಎಂದು ಸ್ಮರಿಸಿದರು.

ಮನೆತನಕ್ಕೆ ಸೀಮಿತವಾಗಿಲ್ಲ:

‘ಕೆಎಲ್‌ಇ ಸಂಸ್ಥೆಯು ಯಾವುದೇ ಮನೆತನಕ್ಕೆ ಸೀಮಿತವಾಗಲಿಲ್ಲ. ಪ್ರಜಾಪ್ರಭುತ್ವ ತಳಹದಿಯ ಮೇಲೆ ನಡೆಯುತ್ತಿದೆ. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಿ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. 106 ವರ್ಷಗಳ ಹಿಂದೆ ನೆಟ್ಟ ಕೆಎಲ್‌ಇ ಸಸಿ ಈಗ ಹೆಮ್ಮರವಾಗಿದೆ. 278 ಅಂಗ ಸಂಸ್ಥೆಗಳನ್ನು ದೇಶದ ತುಂಬಾ‌ ಹೊಂದಿದೆ. ಶಿಕ್ಷಣದಿಂದ ವಂಚಿತವಾದ ಪ್ರದೇಶದಲ್ಲಿ ಶಾಲಾ–ಕಾಲೇಜು ಸ್ಥಾಪಿಸಿದ್ದೇವೆ. ಪ್ರಸ್ತುತ 1.39 ಲಕ್ಷ ಮಕ್ಕಳು ಓದುತ್ತಿದ್ದಾರೆ’ ಎಂದು ತಿಳಿಸಿದರು.

‘ಶಿಕ್ಷಣದೊಂದಿಗೆ ಆರೋಗ್ಯವೂ ಬಹಳ ಮುಖ್ಯ ಎನ್ನುವುದನ್ನು ಅರಿತು, 1986-87ರಲ್ಲಿ ಆಸ್ಪತ್ರೆ ಆರಂಭಿಸಲಾಯಿತು. ಪ್ರಸ್ತುತ 4,300 ಹಾಸಿಗೆಗಳ ಆಸ್ಪತ್ರೆಗಳನ್ನು 13 ಕೇಂದ್ರಗಳಲ್ಲಿ ನಡೆಸುತ್ತಿದ್ದೇವೆ. ಇದರಿಂದಾಗಿ ಈ ಭಾಗದ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಲಭಿಸುತ್ತಿದೆ’ ಎಂದರು.

8ನೇ ಋಷಿ:

‘ಹಿಂದೊಮ್ಮೆ ಮಹಾರಾಷ್ಟ್ರದಲ್ಲಿ ಭೂಕಂಪ ಆದಾಗ ಮೊದಲ ಸೇವೆ ನೀಡಿದವರು ನಮ್ಮ ಆಸ್ಪತ್ರೆ ವೈದ್ಯರು. ಪ್ರವಾಹ ಬಂದಾಗಲೂ ನಾವು ನೆರವಿಗೆ ಮುಂದಿರುತ್ತೇವೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಹೊರತುಪಡಿಸಿದರೆ ಮೊದಲಿಗೆ ಸೇವೆಗೆ ಮುಂದಾದವರು ನಮ್ಮ ವೈದ್ಯಕೀಯ ಸಿಬ್ಬಂದಿ. ಸೋಂಕಿಗೆ ಹೆದರಲಿಲ್ಲ. 300 ಹಾಸಿಗೆಗಳನ್ನು ಮೀಸಲಿಟ್ಟಿದ್ದೆವು. ಸರ್ಕಾರದ ನಂತರ ಹೆಚ್ಚಿನ ಕೋವಿಡ್ ಲಸಿಕೆಯನ್ನು ನಮ್ಮ ಆಸ್ಪತ್ರೆಗಳು ನೀಡಿವೆ’ ಎಂದು ಹೇಳಿದರು.

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ್ ಸಾವೊಜಿ, ‘ಸಂಸ್ಥೆಯು ಸಂಖ್ಯೆಯಿಂದ ಮಾತ್ರವೇ ಬೆಳೆಯದೆ ಗುಣಾತ್ಮಕ ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಪ್ರಭಾಕರ ಕೋರೆ ಅವರು 8ನೇ ಋಷಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಸಾಧನೆಗಾಗಿ ಡಾ ಸುಜಾತಾ ಜಾಲಿ, ಡಾ‌.ಸಂಗಪ್ಪ ದಡೇದ, ಡಾ.ಪ್ರವೀಣ್, ಡಾ.ಉಮಾ ಮುದ್ದೇನಗುಡಿ, ಡಾ.ಸಿದ್ದಲಿಂಗ ಮತ್ತೆಪ್ಪನವರ, ರಾಜನೇಶ್ ಮ್ಯಾಥ್ಯೂ, ಲಲಿತಾ‌ ಮಂಜುನಾಥ್ ಮುಕ್ರಿ ಮತ್ತು ಭಾರತಿ ಅವರನ್ನು ಸತ್ಕರಿಸಲಾಯಿತು. ಪಠ್ಯ ಮತ್ತು ಪಠ್ಯೇತರ ವಿಷಯದಲ್ಲಿ ಪ್ರತಿಭೆ ತೋರಿದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿ ಪದಕ ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕುಲಪತಿ ಡಾ.ಕುಮಾರ್, ಕಾರ್ಯದರ್ಶಿ ಬಿ.ಜಿ. ದೇಸಾಯಿ, ಸದಸ್ಯ ಸುನೀಲ ಜಲಾಲಪುರೆ ಪಾಲ್ಗೊಂಡಿದ್ದರು.

***

ದಾನಿಗಳ ಕೊಡುಗೆ

ಸಂಸ್ಥೆ ಬೆಳವಣಿಗೆಯಲ್ಲಿ ದಾನಿಗಳ ಕೊಡುಗೆ ಬಹಳ‌ಷ್ಟಿದೆ. ಸಂಸ್ಥೆಯು ಜಾತಿಗೆ ಸೀಮಿತವಾಗಿಲ್ಲ. ನಾವು ಮಾಡುತ್ತಿರುವ ಶಿಕ್ಷಣ ಪ್ರಸಾರ ಮತ್ತು ಆರೋಗ್ಯ ಸೇವೆ ನೋಡಿ‌ ದಾನಿಗಳು ನೆರವಾಗುತ್ತಿದ್ದಾರೆ.

–ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಪ್ರಭಾಕರ ಕೋರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT