ಮಂಗಳವಾರ, ಅಕ್ಟೋಬರ್ 20, 2020
26 °C

ಕೆಎಲ್‌ಇ ಮಧುಮೇಹ ಕೇಂದ್ರಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಜರ್ಮನಿಯ ‘ಸ್ವೀಟ್’ ಸಂಸ್ಥೆಯಿಂದ ಪ್ರಶಸ್ತಿ ಪಡೆದು ವಿಶ್ವ ಮಾನ್ಯತೆ ಗಳಿಸಿದೆ.

‘ಚಿಕ್ಕ ಮಕ್ಕಳ ಮಧುಮೇಹ ಚಿಕಿತ್ಸೆ ಮತ್ತು ನಿಯಂತ್ರಣದಲ್ಲಿ ನಿರಂತರವಾಗಿ ಗುಣಮಟ್ಟ ಕಾಯ್ದುಕೊಂಡಿರುವುದನ್ನು ಪರಿಗಣಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ. ವಿಶ್ವದ 59 ದೇಶಗಳ 152 ಕೇಂದ್ರಗಳಲ್ಲಿ ನಮ್ಮ ಕೇಂದ್ರವು ‘ಅತ್ಯುತ್ತಮ ಸುಧಾರಣಾ ಪ್ರಶಸ್ತಿ’ ಗಳಿಸಿದೆ. ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ ದ್ವಿತೀಯ ಪ್ರಶಸ್ತಿಗೆ ಭಾಜನವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಅಂತರರಾಷ್ಟ್ರೀಯ ಚಿಕ್ಕಮಕ್ಕಳ ಮತ್ತು ತರುಣರ ಮಧುಮೇಹ ಸಂಸ್ಥೆ, ಯುರೋಪಿನ ಅಂತರರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನ ಹಾಗೂ ಚಿಕ್ಕಮಕ್ಕಳ ಟೈಪ್-1 ಮಧುಮೇಹ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸ್ವೀಟ್‌’ ಸಂಸ್ಥೆಯು ನೀಡುವ ಪ್ರಶಸ್ತಿ ಇದಾಗಿದೆ’ ಎಂದು ಮಾಹಿತಿ ನೀಡಲಾಗಿದೆ.

‘ಕೊರೊನಾ ಕಾರಣದಿಂದ ಆನ್‌ಲೈನ್‌ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ತಜ್ಞ ವೈದ್ಯೆ ಸುಜಾತಾ ಜಾಲಿ ಪ್ರಶಸ್ತಿ ಸ್ವೀಕರಿಸಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಇದ್ದರು.

‘ಮಧುಮೇಹ ಪೀಡಿತ ಮಕ್ಕಳ ಆರೈಕೆಯಲ್ಲಿ ಅತ್ಯಂತ ನಿಗಾ ವಹಿಸುತ್ತಿರುವುದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದೇವೆ. ಮಧುಮೇಹವು ಮಕ್ಕಳಲ್ಲಿ ಸವಾಲಾಗಿ ಪರಿಣಮಿಸಿದ್ದು, ಅದನ್ನು ತಡೆಗಟ್ಟಲು ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಕೇಂದ್ರವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಶಿಕ್ಷಣ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದ್ದಾರೆ.

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ ಡಾ.ವಿವೇಕ ಸಾವೋಜಿ, ಕುಲಸಚಿವರಾದ ಡಾ.ವಿ.ಎ. ಕೋಠಿವಾಲೆ, ಜೆಎನ್ಎಂಸಿ ಪ್ರಾಚಾರ್ಯರಾದ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು