ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಎಂಸಿಯಲ್ಲಿ ಸುಧಾರಿತ ಸಿಮ್ಯುಲೇಷನ್‌ ಕೇಂದ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಜ.17ಕ್ಕೆ ಉದ್ಘಾಟನೆ
Last Updated 15 ಜನವರಿ 2021, 13:49 IST
ಅಕ್ಷರ ಗಾತ್ರ

ಬೆಳಗಾವಿ: ಪ್ರತಿಕೃತಿಗಳನ್ನು ಬಳಸಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ನಗರದ ಕೆಎಲ್‌ಇ ಸಂಸ್ಥೆಯ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯು ನಗರದ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿ (ಜೆಎನ್‌ಎಂಸಿ)ನಲ್ಲಿ ಸ್ಥಾಪಿಸಿರುವ ‘ಸುಧಾರಿತ ಸಿಮ್ಯುಲೇಷನ್‌ ಕೇಂದ್ರ ಮತ್ತು ಕ್ಲಿನಿಕಲ್ ಕೌಶಲ ಪ್ರಯೋಗಾಲಯ’ದ ಉದ್ಘಾಟನೆ ಜ.17ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸುವರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಮಾನವನ ರೂಪ ಹಾಗೂ ದೇಹ ಲಕ್ಷಣಗಳನ್ನು ಹೋಲುವ ‘ಮ್ಯಾನಿಕ್ವಿನ್‌ ತಂತ್ರಜ್ಞಾನ’ದ ಮೂಲಕ (ಬೊಂಬೆಗಳನ್ನು ಬಳಸಿ) ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಅವರಿಗೆ ಸಮರ್ಪಕ ಹಾಗೂ ನಿಖರವಾದ ಮಾರ್ಗದರ್ಶನ ಸಿಗಲಿದೆ. ನಿಜವಾದ ವ್ಯಕ್ತಿಗಳ ಬದಲಿಗೆ ಈ ಯಂತ್ರ ಆಧರಿತವಾದ ಬೊಂಬೆಗಳನ್ನು ಕೊಟ್ಟು ಪ್ರಾಯೋಗಿಕ ಪರೀಕ್ಷೆ ಮತ್ತು ತರಬೇತಿ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

ಅಮೆರಿಕದಿಂದ:‘ಒಟ್ಟು ₹ 15 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ₹ 7 ಕೋಟಿ ವೆಚ್ಚದಲ್ಲಿ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ. ಶೇ 50ರಷ್ಟು ಪರಿಕರಗಳನ್ನು ಅಮೆರಿಕದಿಂದ ತರಿಸಿ ಜೋಡಿಸಲಾಗಿದೆ. ಅತ್ಯಂತ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಕೇಂದ್ರ ರೂಪಿಸಿದ ಈ ಭಾಗದ ಪ್ರಥಮ ಆಸ್ಪತ್ರೆ ನಮ್ಮದಾಗಿದೆ. ವಿದ್ಯಾರ್ಥಿಗಳ ಕ್ಲಿನಿಕಲ್ ಕೌಶಲಗಳ ವೃದ್ಧಿಗೆ ಬಹಳಷ್ಟು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

‘ರೋಗಿಗಳ ಸುರಕ್ಷತೆ ಉತ್ತೇಜಿಸುವ ಪ್ರಮುಖ ಧ್ಯೇಯದೊಂದಿಗೆ ಅಪಾಯ ಮುಕ್ತ ಕಲಿಕೆಯ ಮೂಲಕ ವೈದ್ಯಕೀಯ ವೃತ್ತಿಪರ ಪಠ್ಯಕ್ರಮಕ್ಕೆ ಸಾಮರ್ಥ್ಯ ಆಧಾರಿತ ಸಿಮ್ಯುಲೇಷನ್ ಶಿಕ್ಷಣ ಇದಾಗಿದೆ. ವೈಜ್ಞಾನಿಕ ತಳಹದಿಯಲ್ಲಿ ಬೋಧಿಸಲಾಗುತ್ತಿದೆ. ಭ್ರೂಣ, ನವಜಾತ ಶಿಶು ಹಾಗೂ ವಯಸ್ಕ ರೋಗಿಗಳ ಆರೈಕೆಗಾಗಿ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮತ್ತು ಇಂಟರ್ವೆನ್ಷನಲ್ ಅಲ್ಟ್ರಾಸೌಂಡ್ ತರಬೇತಿಗಾಗಿ ದೇಹದಂತಿರುವ ಸಿಮ್ಯುಲೇಟರ್‌ಗಳನ್ನು ಕೇಂದ್ರವು ಹೊಂದಿದೆ. 8ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿಜವಾದ ಕ್ಲಿನಿಕಲ್ ಪರಿಸರವನ್ನು ರೂಪಿಸಲಾಗಿದೆ’ ಎಂದರು.

ಹಲವು ವಿಭಾಗಗಳು:‘ತೀವ್ರ ನಿಗಾ ಘಟಕ, ಆಪರೇಷನ್ ಥಿಯೇಟರ್, ಹೊರ ರೋಗಿಗಳ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇತರ ಸ್ನಾತಕೋತ್ತರ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಸಿಮ್ಯುಲೇಟರ್‌ಗಳೊಂದಿಗೆ ಮುಂದಿನ ದಿನಗಳಲ್ಲಿ ವಿಸ್ತರಣೆಗೆ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿನ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದ ವೃತ್ತಿ‍ಪರ ಅಧ್ಯಾಪಕರನ್ನು ಹೊಂದಿದೆ. ಅವರು ಬೋಧನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ತರಬೇತಿ ನೀಡುವುದಕ್ಕೂ ಯೋಜಸಲಾಗಿದೆ’ ಎಂದು ಕೋರೆ ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಮತ್ತು ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಅಕಾಡೆಮಿ ಕುಲಸಚಿವ ಡಾ.ವಿ.ಎ. ಕೋಠಿವಾಲೆ ಇದ್ದರು.

***

ಸುರಕ್ಷಿತ ಹಾಗೂ ನಿಯಂತ್ರಿತ ವಾತಾವರಣದಲ್ಲಿ ಕಲಿಯುವುದಕ್ಕೆ ಅತ್ಯಾಧುನಿಕ ಸಿಮ್ಯುಲೇಟರ್‌ಗಳು ಶಿಕ್ಷಕರಂತೆ ಕಾರ್ಯನಿರ್ವಹಿಸಲಿವೆ. ಕ್ಲಿನಿಕಲ್ ಕ್ರಮದಲ್ಲಿ ತಪ್ಪುಗಳಾದರೆ ತಿಳಿಸುತ್ತೇವೆ. ಕಲಿಕಾರ್ಥಿಯನ್ನು ಎಚ್ಚರಿಸುತ್ತವೆ

- ಪ್ರಭಾಕರ ಕೋರೆ,ಕಾರ್ಯಾಧ್ಯಕ್ಷರು, ಕೆಎಲ್‌ಇ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT