ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಇ ಸಂಸ್ಥೆಯ ಆಯುರ್‌ ಔಷಧಾಲಯ ಉದ್ಘಾಟಿಸಿದ ಡಾ.ಪ್ರಭಾಕರ ಕೋರೆ

‘ದೇಶದ ವಿವಿಧೆಡೆ ಆಯುರ್‌ ಔಷಧಾಲಯ ಸ್ಥಾಪನೆ’
Last Updated 2 ಸೆಪ್ಟೆಂಬರ್ 2022, 14:13 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದ ವಿವಿಧೆಡೆ ಕೆಎಲ್‌ಇ ಸಂಸ್ಥೆಯ ವತಿಯಿಂದ ಆಯುರ್‌ ಔಷಧಾಲಯಗಳನ್ನು ತೆರೆಯಲಾಗುವುದು. ಈ ಮೂಲಕ ದೇಸಿ ಔಷಧಗಳನ್ನು ಜನರಿಗೆ ತಲುಪಿಸಲಾಗುವುದು’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಇಲ್ಲಿನ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಆವರಣದಲ್ಲಿ ಕೆಎಲ್‌ಇ ಆಯುರ್‌ ಔಷಧಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ಫಾರ್ಮ್‌ನಲ್ಲಿ ಕಳೆದ 87 ವರ್ಷಗಳಿಂದ ಆಯುರ್ವೇದ ಔಷಧಿ ಹಾಗೂ ಸಾಂಪ್ರದಾಯಿಕ ಆಯುರ್ವೇದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಒಳ್ಳೆಯ ಗುಣಮಟ್ಟದ ಆಯುರ್‌ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಕ್ರಮಕೈಕೊಳ್ಳಲಾಗಿದೆ’ ಎಂದರು.

‘ಅಲೋಪಥಿ ಔಷಧಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿ ಭಾರತೀಯ ಸಾಂಪ್ರಾದಾಯಿಕ ಔಷಧಿ ಪದ್ಧತಿಯನ್ನು ನಾಶಪಡಿಸಿದ್ದೇವೆ. ಅದನ್ನು ಪುನರುಜ್ಜೀವನ ಮಾಡಬೇಕಾಗಿದೆ. ಅದಕ್ಕಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯುಷ್ಯ ಮಂತ್ರಾಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಅಲೋಪಥಿಗೆ ಪರ್ಯಾಯವಾಗಿ ಹೋಮಿಯೋಪಥಿ ಬೆಳೆದಿದೆ. ಆದರೆ, ಆಯುರ್ವೇದ ಹಿಂದೆ ಬಿದ್ದಿದೆ. ಆದ್ದರಿಂದ ಆಯುರ್ವೇದಕ್ಕೆ ಹೆಚ್ಚಿನ ಒತ್ತು ನೀಡಲು ದೇಶದ ವಿವಿಧೆಡೆ ಆಯುರ್‌ ಔಷಧಾಲಯವನ್ನು ತೆರೆಯಲು ತೀರ್ಮಾನಿಸಿದ್ದೇವೆ’ ಎಂದೂ ಹೇಳಿದರು.

ಸಂಶೋಧನಾ ಕೇಂದ್ರ ಸ್ಥಾಪನೆ: ‘1938ರಲ್ಲಿ ಪ್ರಾರಂಭಿಸಲಾದ ಆಯುರ್ವೇದ ಔಷಧಾಲಯಕ್ಕೆ ಅವಶ್ಯವಿರುವ ಗಿಡಮೂಲಿಕೆಗಳನ್ನು ಬಂಬರಗಾ ಗ್ರಾಮದ ಸುಮಾರು 16 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅದೇ ಪ್ರದೇಶದಲ್ಲಿ ಬೃಹದ್ದಾದ ಆಯುರ್‌ ಫರ್ಮ್‌ ಹಾಗೂ ಸಂಶೋಧನಾ ಕೇಂದ್ರ ತಲೆಎತ್ತಲಿದೆ. ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಆಯುವೇದಿಕ್‌ ಗಿಡಮೂಲಿಕೆಗಳಿದ್ದು, ಅವುಗಳ ಸಂಶೋಧನೆಗಾಗಿ ಕೆಎಲ್‌ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದಿಕ್‌ ಮಹಾವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ. ಅದರೊಂದಿಗೆ ಜೊತೆಗೂಡಿ ಆಯುರ್ವೇದ ಅಭಿವೃದ್ಧಿ ಮಾಡುವುದು ಮತ್ತು ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು’ ಎಂದರು.

ಬಿ.ಎಂ. ಕಂಕಣವಾಡಿ ಆಯುರ್ವೇದಿಕ್‌ ಕಾಲೇಜು ಪ್ರಾಚರ್ಯ ಡಾ.ಸುಹಾಸಕುಮಾರ ಶೆಟ್ಟಿ ಮಾತನಾಡಿ, ‘ಕೆಎಲಇ ಆಯುರ್‌ ಘಟಕದಲ್ಲಿ 326 ತರಹದ ಔಷಧಗಳನ್ನು ತಯಾರಿಸುತ್ತಿದ್ದೇವೆ. ಅದರಲ್ಲಿ 26 ಸಾಂಪ್ರದಾಯಿಕವಾದ, ರೋಗ ತಡೆಗಟ್ಟುವ ಉತ್ಪನ್ನಗಳಿವೆ. ಉತ್ಪನ್ನಗಳನ್ನು ಮಾರಾಟ ಮಾಡುವ ಮೊದಲು ಆಯುಷ್ಯ ಪ್ರಮಾಣೀಕೃತ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಡಿಸಲಾಗುತ್ತದೆ. ಗುಣಮಟ್ಟ ಮತ್ತು ಪರಿಣಾಮಕಾರಿ ಗುಣ ಖಾತ್ರಿಪಡಿಸಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಹರ್ಬಲ್ ಚಹಾ, ಚವನಪ್ರಶ್‌, ಸುವರ್ಣಬಿಂದು ಪ್ರಾಶಣ, ಕಾಸ್ಟಧೂಪ, ಹಲ್ಲಿನ ಪುಡಿ, ಭೃಂಗರಾಜ ಎಣ್ಣೆ, ದುಗ್ದರ್ದಿನಿ ಸೇರಿದಂತೆ ಅನೇಕ ಆಯುರ್ವೇದ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ’ ಎಂದು ತಿಳಿಸಿದರು.

ಕೆಎಲ್‌ಇಎಸ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಎಚ್.ಬಿ. ರಾಜಶೇಖರ, ಡಾ.ವಿ.ಡಿ. ಪಾಟೀಲ, ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಆರಿಫ್ ಮಾಲ್ದಾರ, ಡಾ.ಸುನೀಲ ಜಲಾಲಪುರೆ, ಡಾ.ಪಿ.ಜಿ. ಜಾಡರ, ಡಾ.ಸವಿತಾ ಭೋಸಲೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT