ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ಸಿಬ್ಬಂದಿಯ ಹೆಣ್ಮಕ್ಕಳಿಗೆ ಉಚಿತ ಶಿಕ್ಷಣ’

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪ್ರಕಟ
Last Updated 8 ಮಾರ್ಚ್ 2019, 12:26 IST
ಅಕ್ಷರ ಗಾತ್ರ

ಬೆಳಗಾವಿ: ‘ಕೆಎಲ್‌ಇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸಿ’ ಹಾಗೂ ‘ಡಿ’ ದರ್ಜೆ ಮಹಿಳಾ ನೌಕರರ ಹೆಣ್ಣು ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಿ, ಉಚಿತವಾಗಿ ಶಿಕ್ಷಣ ಕಲ್ಪಿಸಲಾಗುವುದು’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಪ್ರಕಟಿಸಿದರು.

ಕೆಎಲ್‌ಇ ಮಹಿಳಾ ಸ್ವಶಕ್ತಿ ಸಬಲೀಕರಣ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ನಂಥ ಶಿಕ್ಷಣ ಪಡೆಯಲು ಮುಂದಾದರೆ, ನಾವೇ ಓದಿಸುತ್ತೇವೆ. ಮಹಿಳಾ ದಿನಕ್ಕೆ ಇದು ನಮ್ಮ ಕೊಡುಗೆ’ ಎಂದು ತಿಳಿಸಿದರು.

‘ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದ್ದರು. ಅನುಭವ ಮಂಟಪ ಸ್ಥಾಪಿಸಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದರು. ಸಾಮಾಜಿಕ ಕ್ರಾಂತಿ ಮೂಲಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದರು. ಮಹಿಳಾ ದಿನ ಆಚರಿಸಲು ಆರಂಭಿಸಿ ಹಲವು ವರ್ಷಗಳೇ ಕಳೆದಿದ್ದರೂ ಮಹಿಳೆಯರ ಮೇಲಿನ ಅತ್ಯಾಚಾರ, ಶೋಷಣೆ ನಿಂತಿಲ್ಲ. ಮೀಸಲಾತಿಗಾಗಿ ಹೋರಾಟ ಮುಂದುವರಿದಿರುವುದು ಹಾಗೂ ಹಲವು ದೇಶಗಳಲ್ಲಿ ಇಂದಿಗೂ ಮತದಾನದ ಹಕ್ಕು ದೊರೆಯದಿರುವುದು ವಿಷಾದದ ಸಂಗತಿ’ ಎಂದರು.

ಭಯ ಇರುವುದಿಲ್ಲ:‌‘ದೇವತೆಯರನ್ನು ಪೂಜಿಸುವ ನಮ್ಮ ದೇಶದಲ್ಲಿ ಅತ್ಯಾಚಾರಗಳು ಕೊನೆಗೊಳ್ಳುತ್ತಿಲ್ಲ. ಇದು ನೋವಿನ ಸಂಗತಿ. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇತರ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತ್ಯಾಚಾರಗಳು ಕಡಿಮೆ. ಇದಕ್ಕೆ ಇಲ್ಲಿನ ಸಮಾಜ ಸುಧಾರಕರು ಕಾರಣ. ಬಸವಣ್ಣನವರ ಸಮಾನತೆಯ ತತ್ವವನ್ನು ಸಂಸ್ಥೆಯಲ್ಲಿ ಪಾಲಿಸುತ್ತಿದ್ದೇವೆ. ಮಹಿಳೆಯರು ಯಾವುದರಲ್ಲೂ ಹಿಂದುಳಿದಿಲ್ಲ. ಪೈಲೆಟ್‌ ಕೂಡ ಆಗಿದ್ದಾರೆ. ಸ್ವಾಭಿಮಾನ ಬೆಳೆಸಿಕೊಂಡರೆ, ದುಡಿದು ಹಣ ಗಳಿಸಿದರೆ ಭಯ ಇರುವುದಿಲ್ಲ. ಆಗ ಪುರುಷ ಪ್ರಧಾನ ಸಮಾಜ ತಾನಾಗಿಯೇ ಕೊನೆಯಾಗುತ್ತದೆ’ ಎಂದು ತಿಳಿಸಿದರು.

ಉತ್ತರ ಪ್ರದೇಶದ ಬುಂದೇಲ್ ಖಂಡದ ‘ಗುಲಾಬಿ ಗ್ಯಾಂಗ್‌’ ಸಂಸ್ಥಾಪಕಿ ಸಂಪತ್ ದೇವಿ ಪಾಲ್‌ ಮಾತನಾಡಿ, ‘ಅನ್ಯಾಯಕ್ಕೆ ತಲೆಬಾಗದೇ ಅದರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು’ ಎಂದರು.

‘ಮಹಿಳೆಗೆ ಮಹಿಳೆಯೇ ವೈರಿಯಾಗಿದ್ದಾಳೆ. ಅತ್ತೆಯು ಸೊಸೆಯನ್ನು ಮಗಳಂತೆ; ಸೊಸೆಯು ಅತ್ತೆಯನ್ನು ತಾಯಿಯಂತೆ ಕಾಣುವುದಿಲ್ಲ. ಇದರಿಂದ ಇಬ್ಬರ ನಡುವೆ ವೈರತ್ವ ಬೆಳೆಯುತ್ತದೆ’ ಎಂದು ವಿಶ್ಲೇಷಿಸಿದರು.

‌ಪಕ್ಷ ಕಟ್ಟಲ್ಲ:‘ಇಂದಿಗೂ ಅಲ್ಲಲ್ಲಿ ಬಾಲ್ಯವಿವಾಹ ನಡೆಯುತ್ತಿದೆ. ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ. ನಾನು ಯಾವುದೇ ಪಕ್ಷ ಕಟ್ಟಲು ಗುಲಾಬಿ ಗ್ಯಾಂಗ್‌ ಮಾಡಿಲ್ಲ. ಶೋಷೆಣೆ ವಿರುದ್ಧ ಹಾಗೂ ಮಹಿಳಾ ಹಕ್ಕಿನ ಜಾಗೃತಿ ಮೂಡಿಸಲು ಹೋರಾಡುತ್ತಿದ್ದೇನೆ. ಲಕ್ನೋದಲ್ಲಿ ಅಹಿಳೆಗೆ ಅನ್ಯಾಯವಾದಾಗ ಗುಲಾಬಿ ಸೀರೆ ಹಾಕಿಕೊಂಡು ಹೋರಾಡಿದ ಪರಿಣಾಮ, ಸದ್ಯಕ್ಕೆ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ನ್ಯಾಯಾಧೀಶರು ನನ್ನ ಮಾತು ಕೇಳುತ್ತಾರೆ’ ಎಂದು ಅನುಭವ ಹಂಚಿಕೊಂಡರು.

‌ಘಟಕದ ಅಧ್ಯಕ್ಷೆ ಆಶಾತಾಯಿ ಕೋರೆ, ಪ್ರೀತಿ ದೊಡವಾಡ, ಜೆಎನ್‌ಎಂಸಿ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ, ಡಾ.ವಿ.ಡಿ. ಪಾಟೀಲ, ಅಲ್ಕಾ ಕಾಳೆ, ಡಾ.ರೇಣುಕಾ ಮೆಟಗುಡ್ಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT