ಬುಧವಾರ, ಮಾರ್ಚ್ 22, 2023
24 °C
‘ಕಾಹೇರ್‌’ನ ವಿ.ವಿ.ಯ 12ನೇ ಘಟಿಕೋತ್ಸವ: ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್‌ ನಾರಾಯಣ ಅಭಿಪ್ರಾಯ

ವೈದ್ಯಕೀಯ ವಿಜ್ಞಾನ ಕ್ಷೇತ್ರ; ವಿಪುಲ ಅವಕಾಶ- ಡಾ.ಅಶ್ವಥ್‌ ನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಆಧುನಿಕ ಯುಗದಲ್ಲಿ ಉನ್ನತ ಶಿಕ್ಷಣ ಪ್ರಧಾನ ಪಾತ್ರ ವಹಿಸುತ್ತಿದೆ. ಅದರಲ್ಲೂ ಆರೋಗ್ಯ ವಿಜ್ಞಾನಗಳ ಕ್ಷೇತ್ರದ ಈಗ ವಿಶ್ವವ್ಯಾಪಿಯಾಗಿ ಬೆಳೆದಿದೆ. ಅಲ್ಲಿ ಅಪರಿಮಿತ ಅವಕಾಶಗಳು ಸೃಷ್ಠಿಯಾಗುತ್ತಿದ್ದು, ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವಥ್‌ ನಾರಾಯಣ ಕಿವಿಮಾತು ಹೇಳಿದರು.

ಇಲ್ಲಿನ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಕಾಹೇರ್‌)ಯ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ಬುಧವಾರ ಅವರು 12ನೇ ಘಟಿಕೋತ್ಸವ ಭಾಷಣ ಮಾಡಿದರು.

‘ಆರೋಗ್ಯ ವಿಜ್ಞಾನ ಕ್ಞೇತ್ರ ತ್ವರಿತಗತಿಯಲ್ಲಿ ಬದಲಾವಣೆಯಾಗುತ್ತಿದೆ. ಇದರ ಲಾಭ ದುರ್ಗ ಪ್ರದೇಶದ ಜನರಿಗೂ ತಲುಪಬೇಕು. ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿಯಾದಷ್ಟು ಸವಾಲುಗಳೂ ಹುಟ್ಟಿಕೊಳ್ಳುತ್ತವೆ. ಯುವ ವೈದ್ಯರು ಇದನ್ನು ಸವಾಲಾಗಿ ಸ್ವೀಕರಿಸಿ ಸೇವೆ ನೀಡಲು ಮುಂದಾಗಬೇಕು’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯಿಂದ ಜನರ ಜೀವಿತಾವಧಿ ಹೆಚ್ಚಾಗಿದೆ. ಇದರಿಂದ ಹಿರಿಯ ನಾಗರಿಕರ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ. ಅವುಗಳನ್ನು ಎದುರಿಸುವ ಅವಕಾಶ ಕಲ್ಪಿಸಬೇಕಾಗಿದೆ. ವ್ಯಾಯಾಮವಿಲ್ಲದ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಬೊಜ್ಜು, ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹ, ಪಾರ್ಶ್ವವಾಯು ಸೇರಿದಂತೆ ಅನೇಕ ಸಾಂಕ್ರಾಮಿಕಗಳು ಅಧಿಕಗೊಳ್ಳುತ್ತಿವೆ. ಇವುಗಳಿಗೆ ಪರಿಣಾಮಕಾರಿ ಪರಿಹಾರ ಕಂಡು
ಕೊಳ್ಳುವುದು ಯುವ ವೈದ್ಯರ ಮುಂದಿರುವ ಸವಾಲು’ ಎಂದರು.

‘ಸಕಲರಿಗೂ ಗುಣಮಟ್ಟದ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಅಭಿವೃದ್ಧಿ, ಲಿಂಗ ಸಮಾನತೆ, ಜೀವನಾಂಶ, ಅನ್ವಯಿಕ ಜ್ಞಾನ ಮತ್ತು ರಾಷ್ಟ್ರ ನಿರ್ಮಾಣದ ನೆಲೆಗಳನ್ನು ಪರಿಗಣಿಸಿ ಇದನ್ನು ಜಾರಿ ಮಾಡಲಾಗಿದೆ. ಜಾಗತೀಕರಣದ ಓಟದಲ್ಲಿ ಮುಂದಿನ ದಿನಗಳಲ್ಲಿ ನಾವು ಹಿಂದೆ ಬೀಳಬಾರದು ಎಂಬ ಮುಂದಾಲೋಚನೆ ಬಹಳ ಮುಖ್ಯ. ಈ ವಿಚಾರದಲ್ಲಿ ನಮ್ಮ ರಾಜ್ಯವು ಮುಂಚೂಣಿಯಲ್ಲಿದೆ’ ಎಂದರು.

ಎಂಬಿಬಿಎಸ್‌ನಲ್ಲಿ ಎರಡು ಚಿನ್ನದ ಪದಕ ಪಡೆದ ಡಾ.ಯೋಗೇಶ್ವರಿ ಪ್ರಧಾನ ಹಾಗೂ ಡಾ.ಅಲಿಶಾ ಸೇರಿದಂತೆ 37 ಚಿನ್ನದ ಪದಕ ನೀಡಲಾಯಿತು.

ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ.
ವಿವೇಕ ಸಾವೋಜಿ ವಿಶ್ವವಿದ್ಯಾಲಯದ ವರದಿ ಮಂಡಿಸಿದರು. ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಡಾ.ಬಿ.ಜಿ.
ದೇಸಾಯಿ, ಡಾ.ವಿ.ಡಿ.ಪಾಟೀಲ, ಡಾ.
ಎನ್.ಎಸ್. ಮಹಾಂತಶೆಟ್ಟಿ, ಡಾ.ಅಲ್ಕಾ
ಕಾಳೆ, ಡಾ.ಜ್ಯೋತಿ ನಾಗಮೋತಿ, ಡಾ.
ಎಂ.ಎಸ್. ಗಣಾಚಾರಿ, ಸುಧಾ ರೆಡ್ಡಿ,
ಡಾ.ವಿ.ಎಸ್. ಸಾಧುನವರ,ಮಹಾಂತೇಶ ಕೌಜಲಗಿ, ಡಾ.ವಿ.ಐ. ಪಾಟೀಲ, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

*

‘ಕೋರೆ ಅವರಿಗೆ ಉನ್ನತ ಹುದ್ದೆ ಸಿಗಲಿ’

‘ಬಿಜೆಪಿಯ ಹಿರಿಯ ನಾಯಕರಲ್ಲಿ ಡಾ.ಪ್ರಭಾಕರ ಕೋರೆ ಅವರೂ ಒಬ್ಬರು. ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ಸಿಗಲಿ ಎಂದು ನಾನೂ ಆಶಿಸುತ್ತೇನೆ’ ಎಂದು ಸಚಿವ ಡಾ.ಸಿ.ಎನ್‌. ಅಶ್ವಥ್‌ ನಾರಾಯಣ ಹೇಳಿದರು.

‘ಕೋರೆ ಅವರಿಗೆ ಮುಂದಿನ ದಿನಗಳಲ್ಲಿ ರಾಜ್ಯಪಾಲ ಹುದ್ದೆ ನೀಡುವ ಚಿಂತನೆ ನಡೆದಿದೆಯೇ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಕೋರೆ, ‘ಪಕ್ಷದಲ್ಲಿ ಏನು ಕೆಲಸ ಹೇಳುತ್ತಾರೊ, ಮಾಡುವುದು ನನ್ನ ಜವಾಬ್ದಾರಿ. ಆದರೆ, ರಾಜ್ಯ‍ಪಾಲ ಹುದ್ದೆ ವಹಿಸುತ್ತಾರೆ ಎಂಬ ಬಗ್ಗೆ ನನಗೇನೂ ಮಾಹಿತಿ ಇಲ್ಲ’ ಎಂದರು.

*

1,502 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬೆಳಗಾವಿ: ಇಲ್ಲಿನ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಕಾಹೇರ್‌), ಡೀಮ್ಡ್‌ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಸಮಾರಂಭದಲ್ಲಿ ಬುಧವಾರ ವಿವಿಧ ವಿಭಾಗಗಳ ಒಟ್ಟು 1,502 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್‌ ನಾರಾಯಣ ಅವರು ವಿದ್ಯಾರ್ಥಿಗಳಿಗೆ ಪದವಿ ಹಾಗೂ ಪದಕ ಪ್ರಧಾನ ಮಾಡಿ, ಘಟಿಕೋತ್ಸವ ಭಾಷಣ ಮಾಡಿದರು. ಕಾಹೇರ್‌ನ ಕುಲಪತಿ, ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ.ವಿವೇಕ ಸಾವೋಜಿ ವರದಿ ಮಂಡಿಸಿದರು.

ಈ ಬಾರಿ ಒಟ್ಟು 14 ಪಿಎಚ್‌.ಡಿ, 10 ಪೋಸ್ಟ್ ಡಾಕ್ಟರಲ್, 37 ಚಿನ್ನದ ಪದಕ ಗಳು ಸೇರಿ ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಒಟ್ಟು 1,502 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. 494 ಸ್ನಾತಕೋತ್ತರ ಪದವಿ, 909 ಪದವಿ, 11 ಸ್ನಾತಕೋತ್ತರ ಡಿಪ್ಲೊಮಾ, 34 ಸರ್ಟಿಫಿಕೆಟ್ ಕೋರ್ಸ್, 8 ಫೆಲೋಶಿಪ್ ಮತ್ತು 22 ಡಿಪ್ಲೊಮಾ ಪ್ರಮಾಣ ಪತ್ರ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು