ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಸುವರ್ಣ ವಿಧಾನಸೌಧದ ಆವರಣದಲ್ಲಿ ಅನುರಣಿಸಿದ ಕೋಟಿಕಂಠಗಳ ಗಾಯನ

ಕಲ್ಪನೆಯ ಕಣ್ಣು, ಹರಿವನಕ ಸಾಲು ದೀಪಗಳ ಬೆಳಕು...
Last Updated 28 ಅಕ್ಟೋಬರ್ 2022, 10:32 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯೋತ್ಸವ ಅಂಗವಾಗಿ ಸಮೀಪದ ಸುವರ್ಣ ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೋಟಿ ಕಂಠ ಗಾಯನ ಚೇತೋಹಾರಿಯಾಗಿ ಮೂಡಿಬಂದಿತು. ಗಡಿ ಕನ್ನಡಿಗರ ಎದೆಯಲ್ಲಿ ಕಲ್ಪನೆಯ ಕಣ್ಣು, ಹರಿವನಕ ಸಾಲುದೀಪಗಳ ಬೆಳಕು....

ಅಪಾರ ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡ ಸಂಘಟನೆಗಳ ಕಾರ್ಯಕರ್ತರು, ಶಿಕ್ಷಕರು ಏಕಕಾಲಕ್ಕೆ ನಾಡದೇವಿಗೆ ಗೌರವ ಸಲ್ಲಿಸಿದರು. ಒಂದರ ಹಿಂದೆ ಒಂದು ಮೂಡಿಬಂದ ಹಾಡುಗಳು ಅಭಿಮಾನ ಮೂಡಿಸುವಲ್ಲಿ ಯಶಸ್ವಿಯಾದವು.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು... ಗೀತೆಗಳ ಗಾಯನ ಸೊಗಸಾಗಿ ಮೂಡಿಬಂತು.

ಕನ್ನಡ ನೆಲ, ಜಲ, ಜನ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಬದ್ಧವಾಗಿರುತ್ತೇವೆ ಎಂದು ಎಲ್ಲ ಕನ್ನಡ ಮನಸ್ಸುಗಳು ಪ್ರತಿಜ್ಞೆ ಮಾಡಿದವು. ಇದಕ್ಕೂ ಮುನ್ನ ಬಣ್ಣಬಣ್ಣದ ಬಲೂನುಗಳನ್ನು ಆಗಸಕ್ಕೆ ಹಾರಿಬಿಟ್ಟಾಗ ಮಕ್ಕಳ ಸೈನ್ಯ ಚಪ್ಪಾಳೆಗಳ ಮಳೆಗರೆಯಿತು.

ಬಾಟಲಿ ಹಾಲು, ಪಾಪ್‌ಸಾಂಗ್‌: ಗೀತೆ ಹಾಡಿದ ಸಚಿವೆ
ಕಾರ್ಯಕ್ರಮ ಉದ್ಘಾಟಿಸಿದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ಜನಜನಿತ ಗೀತೆ ಹಾಡಿ ಗಮನ ಸೆಳೆದರು.

‘ಮಗುವಿಗೆ ಎದೆಹಾಲು ಕುಡಿಸಲಾರಳು ಆಧುನಿಕ ತಾಯಿ ಇವಳಯ್ಯ... ಬಾಟಲಿ ಹಾಲು ಕುಡಿಸಿ ಚಾಕೊಲೇಟ್ ತಿನ್ನಿಸಿ, ಪಾಪ್‌ಸಾಂಗ್ ಹಾಡುವಳಯ್ಯ...’ ಎಂಬ ಸಾಲುಗಳ ಮೂಲಕ ಕನ್ನಡತನ ಮರೆಯದಂತೆ ಎಚ್ಚರಿಸಿದರು.

‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಭಿವೃದ್ದಿಗಾಗಿ ಆಧುನಿಕ ವಾತಾವರಣಕ್ಕೆ ಒಗ್ಗಬೇಕಾಗುತ್ತದೆ. ಆದರೆ ಅದೇ ನೆಪಕ್ಕಾಗಿ ನಾಡು, ನುಡಿ, ಸಂಸ್ಕೃತಿ ಮರೆತು ಮೂಢರಾಗಬಾರದು’ ಎಂದೂ ಸಚಿವೆ ಜೊಲ್ಲೆ ಕಿವಿಮಾತು ಹೇಳಿದರು.

‘ನಾಡು– ನುಡಿ ವಿಚಾರವಾಗಿ ಅಭಿಮಾನ ಬರೀ ಕೂಗಾಟ, ಪ್ರತಿಭಟನೆಗೆ ಸೀಮಿತವಾಗಬಾರದು. ಪ್ರತಿ ಕ್ಷಣವೂ ಅದನ್ನು ಜೀವಿಸಬೇಕು’ ಎಂದು ಸಂಸದೆ ಮಂಗಳಾ ಅಂಗಡಿ ಸಲಹೆ ನೀಡಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ.ದರ್ಶನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಕೂಡ ಹಾಡುಗಳಿಗೆ ಧ್ವನಿಯಾದರು.

ಕನ್ನಡಾಭಿಮಾನ ಮೆರೆದ ಮರಾಠಿ ಶಿಕ್ಷಕ
ಮರಾಠಿ ಶಾಲೆಯ ಶಿಕ್ಷಕ ವಿನಾಯಕ ಮೋರೆ ಅವರು ಕೋಟಿ ಕಂಠ ಗಾಯನದ ಮುಖ್ಯಪಾತ್ರ ವಹಿಸಿ, ಕನ್ನಡಾಭಿಮಾನ ಮೆರೆದರು. ಸುವರ್ಣ ಸೌಧದ ಮುಂದೆ ಸೇರಿದ ಮಕ್ಕಳ ಸೈನ್ಯಕ್ಕೆ ಕನ್ನಡ ಗೀತೆಗಳನ್ನು ಹೇಳಿಕೊಟ್ಟರು. ಅವರನ್ನು ಅನುಸರಿಸಿ ಮಕ್ಕಳೂ ಹಾಡಿ ಸಂಭ್ರಮಿಸಿದರು.

5,000ಕ್ಕೂ ಹೆಚ್ಚು ಮಕ್ಕಳ ಸಮಾಗಮ
ಸುವರ್ಣ ವಿಧಾನಸೌಧ, ಜಿಲ್ಲಾ ಕ್ರೀಡಾಂಗಣ, ಕೆಎಲ್‌ಇ ಸಂಸ್ಥೆ ಜೆ.ಎನ್‌. ಮೆಡಿಕಲ್ ಕಾಲೇಜು ಉದ್ಯಾನ ಹೀಗೆ ಬೇರೆಬೇರೆ ಕಡೆ ಸಮಾವೇಶಗೊಂಡ ಜಿಲ್ಲೆಯ 5,000ಕ್ಕೂ ಹೆಚ್ಚು ವಿದ್ಯಾರ್ಥಿ– ವಿದ್ಯಾರ್ಥಿನಿಯರು ಕೋಟಿ ಕಂಠ ಗಾಯನಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT