ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀಸಲು ಪೊಲೀಸರಿಗೂ ಉತ್ತಮ ಸೌಲಭ್ಯ’

ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥಸಂಚಲನ
Last Updated 20 ನವೆಂಬರ್ 2019, 16:06 IST
ಅಕ್ಷರ ಗಾತ್ರ

ಬೆಳಗಾವಿ: ‘ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್‌ಗಳಿಗೆ ಕಡ್ಡಾಯವಾಗಿ 12 ರಜೆಗಳು (ಸಿಎಲ್‌) ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಹೇಳಿದರು.

ಇಲ್ಲಿಯ ಕಂಗ್ರಾಳಿಯ ಕೆಎಸ್ಆರ್‌ಪಿ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಬುಧವಾರ ನಡೆದ ರಾಜ್ಯ ಮೀಸಲು ಪೊಲೀಸ್ ‘4ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೆಬಲ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ’ ಕಾರ್ಯಕ್ರಮದಲ್ಲಿ ಪರಿವೀಕ್ಷಣೆ ನಡೆಸಿ ಅವರು ಮಾತನಾಡಿದರು.

‘ಸಿಎಲ್ ಪಡೆಯುವುದು ಕಾನ್ಸ್‌ಟೆಬಲ್‌ಗಳ ಹಕ್ಕು. ಈ ನಿಟ್ಟಿನಲ್ಲಿ ಎಡಿಜಿಪಿ ಪರಿಶೀಲಿಸಬೇಕು. ಮುಂದೆಯಾದರೂ ಕಡ್ಡಾಯವಾಗಿ ರಜೆ ದೊರೆಯುವಂತೆ ಮಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

‘ಕಾನ್‌ಸ್ಟೆಬಲ್‌ಗಳಿಗೆ ನಿಜವಾದ ತರಬೇತಿ ಶುರುವಾಗುವುದು ಕೆಲಸಕ್ಕೆ ಸೇರಿದ ಮೇಲೆಯೇ. ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕಾನ್ಸ್‌ಟೆಬಲ್‌ಗಳಾಗಿದ್ದಾರೆ. ಈ ಬಗ್ಗೆ ಕೀಳರಿಮೆ ಬೇಡ. ಕಲಿತ ವಿದ್ಯೆ ವೃತ್ತಿಗೆ ನೆರವಾಗಲಿದೆ. ಜ್ಞಾನದಿಂದಾಗಿ ಹಲವು ಕಾನ್‌ಸ್ಟೆಬಲ್‌ಗಳು ಉನ್ನತ ಹುದ್ದೆಗಳನ್ನು ತಲುಪಿದ್ದಾರೆ’ ಎಂದು ತಿಳಿಸಿದರು.

‘ಸಾಮಾನ್ಯ ಪೊಲೀಸ್ ಹಾಗೂ ಕೆಎಸ್‌ಆರ್‌ಪಿಯವರ ನಡುವೆ ಸಂಬಳ, ಸವಲತ್ತುಗಳಲ್ಲಿ ವ್ಯತ್ಯಾಸಗಳಿದ್ದವು. ಹೀಗಾಗಿ ಬಹುತೇಕರಲ್ಲಿ ಕೆಎಸ್‌ಆರ್‌ಪಿ ಎಂದರೆ ತಿರಸ್ಕಾರದ ಮನೋಭಾವವಿತ್ತು. ಈಗ ಬಹಳ ಬದಲಾವಣೆಗಳಾಗಿವೆ. ತಾರತಮ್ಯ ಹೋಗಿದೆ. ಉತ್ತಮ ಸಂಬಳ, ಬಡ್ತಿ ದೊರೆಯುತ್ತಿದೆ. ಇಲ್ಲೂ ಸಾಧನೆ ಮಾಡಲು ಬಹಳಷ್ಟು ಅವಕಾಶಗಳಿವೆ. ಅದನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೆಎಸ್ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಡಿಸಿಪಿ ಸಿಮಾ ಲಾಟ್ಕರ್, ಕೆಎಸ್ಆರ್‌ಪಿ ತರಬೇತಿ ಶಾಲೆಯ ಪ್ರಾಚಾರ್ಯ ರಮೇಶ ಬೋರೆಗಾವೆ, ಕಮಾಂಡೆಂಟ್ ಹಂಜಾ ಹುಸೇನ್ ಇದ್ದರು.

165 ಪ್ರಶಿಕ್ಷಣಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿ, ನಿರ್ಗಮನ ಪಥಸಂಚಲನ ನಡೆಸಿದರು. ತರಬೇತಿ ಅವಧಿಯಲ್ಲಿ ಉತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪೊಲೀಸ್ ಅಧಿಕಾರಿಗಳ ವಾರ್ತಾ ಪತ್ರಿಕೆ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT