ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಪತ್ತೆ; ಬೆಳಗಾವಿಯಲ್ಲಿ ಪ್ರಯೋಗಾಲಯ ಸ್ಥಾಪನೆ ಎಂದ ಸಚಿವ ಶ್ರೀರಾಮುಲು

Last Updated 21 ಮಾರ್ಚ್ 2020, 13:42 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆ ಹಚ್ಚುವ ಪ್ರಯೋಗಾಲಯ ಸ್ಥಾಪಿಸಲಾಗುವುದು. ಪ್ರಯೋಗಾಲಯ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ತಕ್ಷಣ ಆರಂಭಿಸುವಂತೆ ಆರೋಗ್ಯ ಸಚಿವ ಆರ್‌.ಶ್ರೀರಾಮುಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

ನಗರದಲ್ಲಿ ಶನಿವಾರ ಕೋವಿಡ್‌– 19 ನಿಯಂತ್ರಣ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸೋಂಕು ನಿಯಂತ್ರಣ ಅಥವಾ ಚಿಕಿತ್ಸೆಗೆ ಹಣದ ತೊಂದರೆಯಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈಗಾಗಲೇ ₹ 200 ಕೋಟಿ ನೀಡಿದ್ದಾರೆ. ಅವಶ್ಯಕತೆ ಇದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡಲು ಸಿದ್ಧರಿದ್ದಾರೆ’ ಎಂದರು.

‘ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಒಂದೂ ಪ್ರಕರಣ ದಾಖಲಾಗದಿರುವುದು ಸಮಾಧಾನಕರ ಸಂಗತಿ. ಮುಂದಿನ ಎರಡು ವಾರ ಮಹತ್ವದ ಅವಧಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಇದುವರೆಗೆ ರಾಜ್ಯದಲ್ಲಿ 18 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 3–4 ಜನರು ಗುಣಮುಖರಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದರು.

ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ:ಅಂತರರಾಜ್ಯ ಜನರ ಸಂಚಾರದ ಮೇಲೆ ನಿಗಾ ವಹಿಸಲು ರಾಜ್ಯ ಪ್ರವೇಶಿಸುವ ರಸ್ತೆಗಳಲ್ಲಿ ಚುನಾವಣಾ ಚೆಕ್ ಪೋಸ್ಟ್ ಮಾದರಿಯಲ್ಲಿ ನಿಗಾ ಮತ್ತು ಆರೋಗ್ಯ ತಪಾಸಣಾ ತಂಡ ನಿಯೋಜಿಸಲು ಸಲಹೆ ನೀಡಿದರು.

ಸಾಮೂಹಿಕ ಪ್ರಾರ್ಥನೆ ಬದಲು ತಮ್ಮ ತಮ್ಮ ಮನೆಗಳಲ್ಲಿಯೇ ಜನರು ಪ್ರಾರ್ಥನೆ ಕೈಗೊಳ್ಳಲು ಮನವೊಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

‘ಸೋಂಕು ಹರಡುವಿಕೆ ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಮುಂದಿನ ಎರಡು ಮಹತ್ವದ ಅವಧಿಯಾಗಿದೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಕ್ವಾರಂಟೈನ್ ಅವಧಿಯಲ್ಲಿ ಇರುವವರು ಯಾವುದೇ ಕಾರಣಕ್ಕೂ ಹೊರಗಡೆ ಹೋಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

‘ಚಿಕ್ಕೋಡಿಯಲ್ಲಿ ಕೆಲವು ಆಟೊಗಳಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್‌ ನೀಡುತ್ತಿದ್ದಾರೆ. ಎನ್‌ಜಿಒ ಸಂಘಟನೆಗಳ ಸಹಕಾರ ಪಡೆದು, ಇದೇ ರೀತಿ ಇತರ ಸ್ಥಳಗಳಲ್ಲೂ ಆಟೊ ಪ್ರಯಾಣಿಕರಿಗೆ ನೀಡಬಹುದೇ’ ಎಂದು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸಲಹೆ ನೀಡಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ‘ದುಬೈನಿಂದ ಬಂದ ಕೆಲವು ಜನರು ರೈಲ್ವೆ ಸ್ಟೇಷನ್‌ಗಿಂತ ಮೊದಲು ಟಿಳಕವಾಡಿಯ 1ನೇ ಗೇಟ್‌ ಬಳಿ ರೈಲಿನ ವೇಗ ಕಡಿಮೆಯಾದಾಗ ಇಳಿಯುತ್ತಿದ್ದಾರೆ. ಇವರು ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇಂತಹವರ ಬಗ್ಗೆ ನಿಗಾ ವಹಿಸಬೇಕು’ ಎಂದರು.

‘ಭಾನುವಾರದಂದು ಹೆಲಿಕಾಪ್ಟರ್‌ ಮೂಲಕ ಔಷಧಿ ಸಿಂಪರಣೆ ಮಾಡಲಾಗುತ್ತಿದೆ ಎಂದು ಕೆಲವು ವಾಟ್ಸ್‌ ಆ್ಯಪ್‌ ಗ್ರುಪ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತಿದೆ. ಇದನ್ನೇ ನಂಬಿದ ಕೆಲವು ಪೌರ ಕಾರ್ಮಿಕರು, ಕೆಲಸಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ. ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ‘ಗೃಹ ಕ್ವಾರಂಟೈನ್ ಇರುವವರಿಗೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ಇಬ್ಬರ ಗಂಟಲು ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ನಿರೀಕ್ಷಿಸಲಾಗಿದೆ’ ಎಂದು ತಿಳಿಸಿದರು.

‘ದುಬೈಯಿಂದ ಅತೀ ಹೆಚ್ಚು ಅಂದರೆ 98 ಜನರು ಜಿಲ್ಲೆಗೆ ಬಂದಿದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೀಡಲಾಗುವ ಮಾಹಿತಿಯನ್ನು ಆಧರಿಸಿ ಗೃಹ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ.
ಚೀನಾದಿಂದ ಮೂರು ವಿದ್ಯಾರ್ಥಿಗಳು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಯಾವುದೇ ಸೋಂಕು ಕಂಡುಬಂದಿಲ್ಲ’ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮಾತನಾಡಿ, ಜಿಲ್ಲೆಯಲ್ಲಿ 167 ಜನರನ್ನು ಅವರವರ ಮನೆಯಲ್ಲಿ ನಿಗಾ ವಹಿಸಲಾಗಿದೆ. 3 ಜನರು 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದು, 132 ಜನರು 14 ದಿನಗಳ ನಿಗಾ ಪೂರ್ಣಗೊಳಿಸಿದ್ದಾರೆ ಎಂದು ವಿವರಿಸಿದರು.

ಕೆ.ಎಲ್.ಇ. ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ವಿ.ಜಾಲಿ ಮಾತನಾಡಿ, ‘ತುರ್ತು ಪರಿಸ್ಥಿತಿ ‌ನಿಭಾಯಿಸಲು ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಸ್ಪತ್ರೆ ಕ್ವಾರಂಟೈನ್ ಮತ್ತು ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಒಟ್ಟಾರೆ 160 ಬೆಡ್ ಹಾಗೂ ವೆಂಟಿಲೇಶನ್ ಸೌಲಭ್ಯದ 6 ಬೆಡ್ ಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ’ ಎಂದು ವಿವರಿಸಿದರು.

ನಗರದಲ್ಲಿ ಕೈಗೊಡಿರುವ ಕ್ರಮಗಳ ಬಗ್ಗೆ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್. ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಶಾಸಕರಾದ ಮಹಾಂತೇಶ ದೊಡಗೌಡ್ರ, ಗಣೇಶ ಹುಕ್ಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT