ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕಕ್ಕಿಲ್ಲದ ಪಕ್ಷೇತರರು, ಸಣ್ಣ ಪಕ್ಷಗಳು!

ರಾಷ್ಟ್ರೀಯ ಪಕ್ಷದ ಅಬ್ಬರಕ್ಕೆ ಬಹುತೇಕ ಅಭ್ಯರ್ಥಿಗಳು ತತ್ತರ l ಮೂರು ಕ್ಷೇತ್ರಗಳಲ್ಲಿ ‘ನೋಟಾ’ಕ್ಕಿಂತಲೂ ಕಡಿಮೆ
Last Updated 17 ಮೇ 2018, 8:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಎರಡು ದಶಕಗಳ ಹಿಂದೆ ಚಿತ್ರದುರ್ಗದಲ್ಲಿ ಕಡಿಮೆ ಎಂದರೂ ಎರಡ್ಮೂರು ಸ್ಥಾನ ಪಕ್ಷೇತರ ಅಭ್ಯರ್ಥಿಗಳ ಪಾಲಾಗುತ್ತಿತ್ತು. ಆದರೆ, ಈ ಬಾರಿ  ಚುನಾವಣೆ ಅದಕ್ಕೆ ವ್ಯತಿರಿಕ್ತವಾಗಿದ್ದು, ಠೇವಣಿ ಪಡೆಯಲೂ ಬಹುತೇಕ ಪಕ್ಷೇತರರಿಗೆ ಸಾಧ್ಯವಾಗಿಲ್ಲ.

ಪಕ್ಷೇತರ ಅಭ್ಯರ್ಥಿ ಚುನಾಯಿತರಾಗುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಚಿತ್ರಣ ಬದಲಾಗಿದೆ.  ಸ್ಪರ್ಧೆಯಲ್ಲಿದ್ದ 30 ಕ್ಕೂ ಹೆಚ್ಚು ಪಕ್ಷೇತರರು, ಸಣ್ಣ ಪಕ್ಷಗಳ ಅಭ್ಯರ್ಥಿಗಳು ದೂಳಿಪಟವಾಗಿದ್ದಾರೆ.

ಗೆಲ್ಲುವ ವಾತಾವರಣ ಇತಿಹಾಸ: 1994 ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಎಚ್.ತಿಪ್ಪಾರೆಡ್ಡಿ 38,332 ಮತ ಗಳಿಸಿ ಗೆಲುವು ಸಾಧಿಸಿದ್ದರು. ಅದೇ ರೀತಿ 1999ರಲ್ಲೂ 51 ಸಾವಿರಕ್ಕೂ ಅಧಿಕ ಮತಗಳೊಂದಿಗೆ ಗೆಲುವಿನ ನಗೆ ಬೀರಿದ್ದರು. 1994ರಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಎನ್‌.ವೈ.ಗೋಪಾಲಕೃಷ್ಣ 29,492 ಮತ, ಹೊಳಲ್ಕೆರೆಯಿಂದ ಎ.ವಿ.ಉಮಾಪತಿ 26,010 ಮತ ಗಳಿಸಿದ್ದರು. ಹೊಸದುರ್ಗದಲ್ಲಿ  ಟಿ.ಎಚ್.ಬಸವರಾಜು 26,453 ಮತಗಳನ್ನು ಪಡೆದು ಜಯಗಳಿಸಿದ್ದರು.

1999 ರಲ್ಲಿ ಹೊಸದುರ್ಗದ ಬಿ.ಜಿ.ಗೋವಿಂದಪ್ಪ 26,300 ಮತ ಪಡೆದಿದ್ದರು. 2008 ರಲ್ಲಿ ಪಕ್ಷೇತರರಾಗಿ ಹಿರಿಯೂರು ಕ್ಷೇತ್ರದಿಂದ ಡಿ.ಸುಧಾಕರ್ 43 ಸಾವಿರಕ್ಕೂ ಅಧಿಕ ಮತ, ಹೊಸದುರ್ಗದಲ್ಲಿ ಗೂಳಿಹಟ್ಟಿ ಡಿ.ಶೇಖರ್ 41 ಸಾವಿರ ಮತ ಪಡೆದು ಗೆಲುವು ಸಾಧಿಸಿದ್ದರು. ಈ ಇಬ್ಬರು ಸಚಿವರಾಗಿ ಆಡಳಿತ ನಡೆಸಿದ್ದರು.

ಲೆಕ್ಕಚಾರವಿಲ್ಲದೇ ಅನೇಕ ಸಣ್ಣ ಪಕ್ಷಗಳು ಮನ್ನಣೆ ನೀಡಿ ‘ಬಿ’ ಫಾರಂ ನೀಡಿದ್ದವು. ಆದರೆ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಜಾಹೀರಾತು, ಪ್ರಚಾರದ ತಂತ್ರಗಾರಿಕೆಗೆ ಪ್ರತಿಯಾಗಿ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಪಕ್ಷೇತರರ ದನಿ ಜನರನ್ನು ತಲುಪಲಿಲ್ಲ.

ಮೂರು ಕ್ಷೇತ್ರಗಳಲ್ಲಿ ನೋಟಾಕಿಂತಲೂ ಕಡಿಮೆ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಸಮಾಜವಾದಿ ಪಕ್ಷ, ಕೆಜೆಪಿ, ತಲಾ ಎರಡರಲ್ಲಿ ಸ್ವರಾಜ್ ಇಂಡಿಯಾ ಪಕ್ಷ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ, ಎಂಇಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಠೇವಣಿ ಪಡೆಯಲು ಸಾಧ್ಯವಾಗಿಲ್ಲ.

ಅದೇ ರೀತಿ ತಲಾ ಒಂದರಲ್ಲಿ ಸಾಮಾನ್ಯ ಜನತಾಪಕ್ಷ (ಲೋಕತಾಂತ್ರಿಕ), ಕರ್ನಾಟಕ ಸ್ವಾಭಿಮಾನಿ ರೈತ ಕಾರ್ಮಿಕರ ಪಕ್ಷ, ಕನ್ನಡ ಪಕ್ಷ, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ), ಪ್ರಜಾ ರೈತ ರಾಜ್ಯ ಪಕ್ಷ, ರಿಪಬ್ಲಿಕನ್ ಸೇನಾ ಪಕ್ಷ, ಭಾರತೀಯ ಜನಶಕ್ತಿ ಕಾಂಗ್ರೆಸ್, ಅಂಬೇಡ್ಕರ್ ಸಮಾಜ ಪಾರ್ಟಿ, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ, ಜನತಾದಳ (ಸಂಯುಕ್ತ) ಈ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಬಿಜೆಪಿ ಪ್ರಥಮ, ಕಾಂಗ್ರೆಸ್ ದ್ವಿತೀಯ, ಜೆಡಿಎಸ್ ಮೂರನೇ ಸ್ಥಾನ ಪಡೆದುಕೊಂಡಿದೆ. ಅಬ್ಬರದ ಪ್ರಚಾರದ ನಡುವೆ ಪಕ್ಷೇತರರೂ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ.

ಬಿಜೆಪಿ ಅಲೆಯಲ್ಲಿ ಕೊಚ್ಚಿ ಹೋದ ಪಕ್ಷೇತರರು

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅಲೆ ನಡುವೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಹೊರತುಪಡಿಸಿ ಬೇರೆಡೆ ಗೆಲ್ಲಲು ಸಾಧ್ಯವಾಗಿಲ್ಲ. ಜೆಡಿಎಸ್‌ಗೆ ಒಂದೂ ಸ್ಥಾನ ಲಭಿಸಲಿಲ್ಲ. ಪಕ್ಷೇತರರ ಜತೆಜತೆಗೆ ಅನೇಕ ಸಣ್ಣ ಪಕ್ಷಗಳ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ.

**
ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಅಬ್ಬರದ ಪ್ರಚಾರ ಮಾಡಿದ್ದರಿಂದ ಮತಗಳು ಕಡಿಮೆ ಬರಲು ಕಾರಣವಾಗಿದೆ. ಈ ಸೋಲನ್ನು ಸವಾಲಾಗಿ ಸ್ವೀಕರಿಸುವೆ
– ಎ.ಆರ್‌.ಶಮಂತ್‌ ಕೋಟೆ, ಹೊಸದುರ್ಗ
**
ಅಬ್ಬರದ ಪ್ರಚಾರದ ಭರಾಟೆ, ಪ್ರಬಲ ಜಾತಿಗಳ ಪ್ರಾಬಲ್ಯ, ಶ್ರೀರಾಮುಲು ಅಲೆ, ವೀರಶೈವ – ಲಿಂಗಾಯತ ವಿವಾದ. ಈ ಕಾರಣದಿಂದಾಗಿ ಮತಗಳು ಕಡಿಮೆ ಬಂದಿವೆ
– ಎಸ್.ರಂಗಯ್ಯ, ಪಕ್ಷೇತರ ಅಭ್ಯರ್ಥಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT