ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ನಾಡಿನಲ್ಲಿ ನೀರಾವರಿ ಜಪ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಕಾಫಿ ನಾಡಿನಲ್ಲಿ ಚುನಾವಣೆ ಕಾವು ದಿನೇದಿನೇ ಏರುತ್ತಿದೆ. ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಸುತ್ತಿ ‘ಶಾಶ್ವತ ನೀರಾವರಿ ಯೋಜನೆ’, ‘ ಸಮಗ್ರ ಅಭಿವೃದ್ಧಿ’ ಜಪದಲ್ಲಿ ತೊಡಗಿದ್ದಾರೆ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ ವೈಶಿಷ್ಟ್ಯದ ಈ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಮತದಾರರ ನಾಡಿಮಿಡಿತ ಅರಿಯುವ ತಂತ್ರಗಾರಿಕೆ ಮುಂದುವರಿದಿದೆ.

ಚುನಾವಣೆ ಭರಾಟೆಯನ್ನು ಮತದಾರರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಅಭ್ಯರ್ಥಿಯ ಸಾಮರ್ಥ್ಯ, ಪಕ್ಷದ ಅಲೆ, ಸಾಧನೆಗಳನ್ನು ಆಧರಿಸಿ, ಯಾರು ಹಿತವರು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮಲೆನಾಡು ಭಾಗದ ಕ್ಷೇತ್ರಗಳಲ್ಲಿ ‘ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ’, ಬಯಲುಸೀಮೆಯ ಕ್ಷೇತ್ರಗಳಲ್ಲಿ ‘ಜಲಪಾತ, ಜಲಾಶಯಗಳ ನೀರು ಬಳಸಿಕೊಂಡು ಕೆರೆಗಳನ್ನು ತುಂಬಿಸುವ ಯೋಜನೆ’ ಜಪ ಮುಂಚೂಣಿಯಲ್ಲಿವೆ. ಒಂದೊಮ್ಮೆ ಮತಬೇಟೆಯ ಅಸ್ತ್ರವಾಗಿದ್ದ ‘ಹಿಂದುತ್ವ’, ‘ಶ್ರೀಗುರು
ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ’ ವಿಚಾರಗಳು ಬದಿಗೆ ಸರಿದಿವೆ.

ಕಾಫಿ, ಅಡಿಕೆ, ತೆಂಗು ಬೆಳೆಗಾರರ ಸಂಕಷ್ಟಗಳು, ಮಾನವ–ವನ್ಯಜೀವಿ ಸಂಘರ್ಷ, ಒತ್ತುವರಿ, ಕುಡಿಯುವ ನೀರಿಗೆ ತತ್ವಾರ, ನೀರಾವರಿ ಯೋಜನೆಗಳ ಕೊರತೆ, ಉದ್ಯೋಗ ಅರಸಿ ಗುಳೆ ಇಲ್ಲಿನ ಪ್ರಮುಖ ಸಮಸ್ಯೆಗಳು. ಕೈಗಾರಿಕೆ, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಪ್ರವಾಸೋದ್ಯಮ ಅಭಿವೃದ್ಧಿ ಪ್ರಮುಖ ಬೇಡಿಕೆಗಳಾಗಿವೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಂಥ ಅತಿರಥರು ಜಿಲ್ಲೆಯ ಶೃಂಗೇರಿಯಲ್ಲಿ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದಾರೆ. ಎಚ್‌.ಡಿ.ದೇವೇಗೌಡರು ಕುಟುಂಬ ಸಮೇತರಾಗಿ ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನೆರವೇರಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಇದೇ 9ರಂದು ಪ್ರಧಾನಿ ನರೇಂದ್ರ ಮೋದಿ ಚಿಕ್ಕಮಗಳೂರಿಗೆ ಬರಲಿದ್ದಾರೆ.

ಐದು ಕ್ಷೇತ್ರಗಳಿಂದ 60 ಮಂದಿ ಕಣದಲ್ಲಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಬರೋಬ್ಬರಿ 18 ಅಭ್ಯರ್ಥಿಗಳು ಇದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ತಲಾ ಇಬ್ಬರು ಹಾಗೂ ಕಾಂಗ್ರೆಸ್‌ನ ಒಬ್ಬರು ಶಾಸಕರು ಇದ್ದಾರೆ. ಐವರು ಶಾಸಕರೂ ಮತ್ತೆ ಚುನಾವಣಾ ಕಣದಲ್ಲಿದ್ದಾರೆ.

ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದು, ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಡಿ.ಎಸ್‌.ಸುರೇಶ್‌, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಸ್‌.ಎಂ.ನಾಗರಾಜ್‌, ಜೆಡಿಎಸ್‌ನಿಂದ ಮಾಜಿ ಶಾಸಕ ಟಿ.ಎಚ್‌.ಶಿವಶಂಕರಪ್ಪ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿ ಟಿಕೆಟ್‌ ಕೈತಪ್ಪಿದ ಎಚ್‌.ಎಂ.ಗೋಪಿಕೃಷ್ಣ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇಲ್ಲಿ ಈ ಐವರ ನಡುವೆ ಹಣಾಹಣಿ ಏರ್ಪಟ್ಟಿದೆ.

ಇತರ ಕ್ಷೇತ್ರಗಳಿಗೆ ಹೋಲಿಸಿದರೆ ತರೀಕೆರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮಂಜೂರಾಗಿದೆ. ಅಜ್ಜಂಪುರ ತಾಲ್ಲೂಕು ಕೇಂದ್ರವಾಗಿದೆ. ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಅಲ್ಲಿನ ಜನ ಹೇಳುತ್ತಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೀರಶೈವ ಮತ್ತು ಲಿಂಗಾಯತ ವಿಭಜನೆ ತಂತ್ರವು ಸಮುದಾಯದವರಿಗೆ ನೋವು ಉಂಟು ಮಾಡಿದೆ. ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಕಾಂಗ್ರೆಸ್‌ ಸರ್ಕಾರದ ‘ಭಾಗ್ಯ’ಗಳ ಬಗ್ಗೆ ಜನರಿಗೆ ಖುಷಿ ಇದೆ’ ಎಂದು ಶಿಕ್ಷಕ ನಟರಾಜ್‌ ವಿಶ್ಲೇಷಿಸುತ್ತಾರೆ.

ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿಯ ಸಿ.ಟಿ.ರವಿ ಹಾಗೂ ಶೃಂಗೇರಿ ಕ್ಷೇತ್ರದ ಜೀವರಾಜ್‌ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಮಗುಮ್ಮಾಗಿ ಇದೆ. ರಸ್ತೆಗಳು ಅಭಿವೃದ್ಧಿಯಾಗಿವೆ ಎಂದು ಜನ ಹೇಳುತ್ತಾರೆ.

‘ಕರಗಡ ಏತ ನೀರಾವರಿ ಯೋಜನೆ ಸಮರ್ಪಕವಾಗಿ ಆಗಿಲ್ಲ. 15 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಕಾಲುವೆಯಲ್ಲಿ ನೀರು ಸರಿಯಾಗಿ ಹರಿಯದು’ ಎಂದು ಕಳಸಾಪುರದ ರೈತ ಮಲ್ಲೇಗೌಡ ಹೇಳುತ್ತಾರೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್‌, ಜೆಡಿಎಸ್‌ನಿಂದ ವರ್ತಕ ಬಿ.ಎಚ್‌.ಹರೀಶ್‌ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ಪೈಪೋಟಿ ಇದೆ. ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿ.ಡಿ.ರಾಜೇಗೌಡ, ಜೆಡಿಎಸ್‌ನಿಂದ ಎಚ್‌.ಜಿ.ವೆಂಕಟೇಶ್‌ ಕಣದಲ್ಲಿದ್ದಾರೆ. ಇಲ್ಲಿಯೂ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ಹಣಾಹಣಿ ಇದೆ.

ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ಜೆಡಿಎಸ್‌ನ ಬಿ.ಬಿ.ನಿಂಗಯ್ಯ, ಮಾಜಿ ಸಚಿವರಾದ ಮೋಟಮ್ಮ ಮತ್ತು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ನಡುವೆ ಸ್ಪರ್ಧೆ ಇದೆ. ಕಳಸ ಹೋಬಳಿಯನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂಬ ಬಹುವರ್ಷಗಳ ಬೇಡಿಕೆ ಈಡೇರಿಲ್ಲ ಎಂಬ ಆಕ್ರೋಶ ಈ ಭಾಗದ ಜನರಲ್ಲಿ ಇದೆ. ಕಡೂರು ಕ್ಷೇತ್ರದಲ್ಲಿ ಪ್ರೀತಿ ರಾಜಕಾರಣದ ಅಲೆಯಲ್ಲಿ ಕಳೆದ ಬಾರಿ ಗೆದ್ದಿದ್ದ ಶಾಸಕ, ಜೆಡಿಎಸ್‌ನ ವೈಎಸ್‌ವಿ ದತ್ತ ಅವರಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಸವಾಲೊಡ್ಡಿವೆ. ಬಿಜೆಪಿಯಿಂದ ಕೆ.ಎಸ್‌.ಪ್ರಕಾಶ್‌ (ಬೆಳ್ಳಿ ಪ್ರಕಾಶ್‌) ಮತ್ತು ಕಾಂಗ್ರೆಸ್‌ನಿಂದ ಕೆ.ಎಸ್‌.ಆನಂದ್‌ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT