ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ನಿರ್ಮಾಣ: ಗ್ರಾಮ ಪಂಚಾಯ್ತಿಗಳಿಗೆ ಅಧಿಕಾರ-ಸಚಿವ ಈಶ್ವರಪ್ಪ

ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಈಶ್ವರಪ್ಪ ಹೇಳಿಕೆ
Last Updated 17 ಜೂನ್ 2021, 13:59 IST
ಅಕ್ಷರ ಗಾತ್ರ

ಬೆಳಗಾವಿ: ‘ಕೆರೆ ನಿರ್ಮಾಣದ ವಿಷಯದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆರೆಗಳ ನಿರ್ಮಾಣ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಇದರಿಂದ ರೈತರಿಗೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿ ಆಗುತ್ತದೆ. ಹೀಗಾಗಿ, ಪ್ರತಿ ಪಂಚಾಯಿತಿಯಲ್ಲೂ ಕಡ್ಡಾಯವಾಗಿ ಒಂದು ಹಾಗೂ ಹೆಚ್ಚುವರಿಯಾಗಿ ಎಷ್ಟನ್ನಾದರೂ ನಿರ್ಮಿಸಬಹುದು. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಚೀಟಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗೆ ಅಭಿನಂದನೆ:

‘ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ 935 ಎಕರೆಯನ್ನು ಜಿಲ್ಲೆಯಲ್ಲಿ ನೀಡಿರುವುದು ದಾಖಲೆಯಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಅಭಿನಂದಿಸುತ್ತೇನೆ’ ಎಂದರು.

‘ಕೃಷಿ ಹೊಂಡಗಳಿಂದ ರೈತರಿಗೆ ಹೆಚ್ಚಿನ ಪ್ರಯೋಜನ ಇದೆ. ಹೀಗಾಗಿ, ಅವುಗಳ ನಿರ್ಮಾಣದ ನಿಗದಿತ ಗುರಿ ಸಾಧಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗುರಿ ಸಾಧನೆ ಆಗದಿರುವುದಕ್ಕೆ ಕಾರಣಗಳನ್ನು ಪತ್ತೆ ಹಚ್ಚಬೇಕು. ಸಮುದಾಯ ಆಧಾರಿತ ಕಾಮಗಾರಿ ಸಾಧ್ಯವಾಗದಿದ್ದರೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಗುರಿ ತಲುಪಬೇಕು’ ಎಂದು ನಿರ್ದೇಶನ ನೀಡಿದರು.

‘ಜಲಜೀವನ ಮಿಷನ್ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು. ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

‘ಎಲ್ಲ ಗ್ರಾಮ ಪಂಚಾಯ್ತಿಗಳ ಸದಸ್ಯರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು. ಕೋವಿಡ್–19ನಿಂದ ನಿಧನರಾಗಿರುವ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶೀಘ್ರವಾಗಿ ಪರಿಹಾರ ಒದಗಿಸಲು ಪ್ರಕ್ರಿಯೆ ನಡೆಸಬೇಕು’ ಎಂದು ತಿಳಿಸಿದರು.

ಬೇರೆ ಕಡೆಯಿಂದ ತನ್ನಿ:

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ತೋಟಪಟ್ಟಿ ರಸ್ತೆ ಮಾಡುವಾಗ ಪಕ್ಕದಲ್ಲೇ ಇರುವ ಮಣ್ಣು ಬಳಸುವ ಬದಲಿಗೆ ಬೇರೆ ಕಡೆಯಿಂದ ತರಬೇಕು. ಈ ಕಾರ್ಯಕ್ಕೆ ಸಂಬಂಧಿಸಿದ ಜಮೀನುಗಳ ಮಾಲೀಕರ ನೆರವು ಪಡೆಯಬೇಕು’ ಎಂದು ಸಲಹೆ ನೀಡಿದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ‌. ಅತೀಕ್, ‘ಅರಣ್ಯೀಕರಣ ಯೋಜನೆಯಲ್ಲಿ ಸಸಿಗಳನ್ನು ನೆಟ್ಟರೆ ಸಾಲದು. ಪೋಷಣೆಗೂ ಆದ್ಯತೆ ನೀಡಬೇಕು. ಜಲಜೀವನ ಮಿಷನ್‌ನಲ್ಲಿ ಬಾಕಿ ಉಳಿದಿರುವ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾರ್ಯವನ್ನುಜೂನ್ 30ರೊಳಗೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಜಿ.ಪಂ. ಸಿಇಒ ಎಚ್‌.ವಿ. ದರ್ಶನ್‌, ‘ಮೂರು ಹಂತಗಳಲ್ಲಿ ಕೋಟಿವೃಕ್ಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 4ಸಾವಿರಕ್ಕೂ ಅಧಿಕ ಬಚ್ಚಲು ಗುಂಡಿಗಳನ್ನು (ಇಂಗು ಗುಂಡಿ) ನಿರ್ಮಿಸಲಾಗಿದೆ. ಕೃಷಿ ಹೊಂಡ ಹಾಗೂ ತೆರೆದ ಬಾವಿ ನಿರ್ಮಾಣಕ್ಕೆ ಆದ್ಯತೆ ಕೊಡಲಾಗಿದೆ’ ಎಂದು ಮಾಹಿತಿ ನೀಡಿದರು.

ಸಂಸದೆ ಮಂಗಲಾ ಸುರೇಶ ಅಂಗಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT