ಮಂಗಳವಾರ, ಸೆಪ್ಟೆಂಬರ್ 28, 2021
20 °C

ಲಕ್ಕಪ್ಪಗೌಡ, ಜಯಂತಿ ಕೊಡುಗೆ ಸ್ಮರಣೆ: ಕನ್ನಡ ಅಧ್ಯಾಪಕರಿಂದ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸೋಮವಾರ ನಿಧನರಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಚ್.ಜೆ. ಲಕ್ಕಪ್ಪಗೌಡ ಹಾಗೂ ಚಲನಚಿತ್ರ ನಟಿ ಜಯಂತಿ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು ಕನ್ನಡ ಅಧ್ಯಾಪಕರ ಪರಿಷತ್ತು ಶ್ರದ್ಧಾಂಜಲಿ ಸಲ್ಲಿಸಿತು.

ಇಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯ ಬಿಬಿಎ ಮಹಾವಿದ್ಯಾಲಯದಲ್ಲಿ ನಡೆದಿರುವ ಕನ್ನಡ ಮೌಲ್ಯಮಾಪನ ಕೇಂದ್ರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.

ಕಾರ್ಯದರ್ಶಿ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿ, ‘ಡಾ.ಲಕ್ಕಪ್ಪಗೌಡ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರಲ್ಲದೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿಯೂ ಉಲ್ಲೇಖಾರ್ಹ ಕಾರ್ಯ ಮಾಡಿದ್ದರು. ಕನ್ನಡದಲ್ಲಿ ಅಂಬೇಡ್ಕರ್ ಸಾಹಿತ್ಯ ವಿರಳವಿದ್ದ ಸಂದರ್ಭದಲ್ಲಿ ‘ದಲಿತ ಸೂರ್ಯ’ ಎನ್ನುವ ಕೃತಿ ರಚಿಸಿದ್ದ ಅವರು ಜಾನಪದ ಮತ್ತು ಶಿಷ್ಟ ಸಾಹಿತ್ಯ ಎರಡರಲ್ಲೂ ಗಣನೀಯ ಕಾರ್ಯ ಮಾಡಿದ್ದರು’ ಎಂದು ಸ್ಮರಿಸಿದರು.

‘ನಟಿ ಜಯಂತಿ ಅವರನ್ನು ಕುರಿತು ಕನ್ನಡ ಚಲನಚಿತ್ರರಂಗಕ್ಕೆ ‘ಜೇನುಗೂಡು’ ಚಿತ್ರದ ಮೂಲಕ ಪ್ರವೇಶಿಸಿ ವಿವಿಧ ಪಾತ್ರ ಮತ್ತು ತಮ್ಮ ಅಪೂರ್ವ ನಟನೆಯ ಮೂಲಕ ಅಭಿನಯ ಶಾರದೆ ಎನ್ನುವ ಬಿರುದಿಗೆ ಪಾತ್ರರಾಗಿದ್ದರು. ಹಾಡಿನ ಅಭಿನಯದಲ್ಲಿ ಓನಕೆ ಓಬವ್ವಳನ್ನು ಚಿರಸ್ಥಾಯಿಗೊಳಿಸಿದ ಅವರು ರಾಜಕುಮಾರ್  ಅವರೊಂದಿಗೆ ಅತಿ ಹೆಚ್ಚು ಪಾತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಮಸಣದ ಹೂವು ಚಿತ್ರದಲ್ಲಿನ ತಮ್ಮ ಅಮೋಘ ಅಭಿನಯದಂತೆ ಅನೇಕ ಪಾತ್ರಗಳಿಗೆ ಜೀವ ತುಂಬಿ ಕನ್ನಡಿಗರ ನೆನಪಿನಲ್ಲಿ ಚಿರಸ್ಥಾಯಿಯಾಗಿದ್ದಾರೆ’ ಎಂದು ನುಡಿನಮನ ಸಲ್ಲಿಸಿದರು.

ಮೌಲ್ಯಮಾಪನ ಅಧ್ಯಕ್ಷರಾಧ ಡಾ.ಕೃಷ್ಣ ಮೆಳವಂಕಿ, ಡಾ.ರಾಜಶೇಖರ ಬಸುಪಟ್ಟದ, ಡಾ.ಅಶೋಕ ನರೋಡೆ, ಡಾ.ಸಂಗಮನಾಥ ಲೋಕಾಪೂರ ಹಾಗೂ ಹಿರಿಯ ಅಧ್ಯಾಪಕರಾದ ಡಾ.ಶಕುಂತಲಾ ನಾವಲಗಿ, ಗಂಗಾಂಬಿಕಾ ಚೌಗಲಾ, ಡಾ.ಎಚ್.ಬಿ. ಕೋಲ್ಕಾರ, ಪ್ರೊ.ಎಸ್.ಎಸ್. ತಾವರಖೇಡ, ವಿಜಯ ಧಾರವಾಡ, ಡಾ.ಚಂದ್ರು ತಳವಾರ, ಬಸವರಾಜ ಕುಂಬಾರ ಮತ್ತು ಪರಿಷತ್ತಿನ ಪದಾಧಿಕಾರಿಗಳಾದ ಡಾ.ಸರೇಶ ಹನಗಂಡಿ, ಮಲ್ಲಿಕಾರ್ಜುನ ಮಾವಿನಕಟ್ಟಿ, ಡಾ.ರಮೇಶ ತೇಲಿ, ಡಾ.ಪದ್ಮಾ ಹೊಸಕೋಟಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು