ಬೆಳಗಾವಿ: ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮೀಣ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ, ‘ಬಿಜೆಪಿ ಸರ್ಕಾರ ಬಂದ ಮೇಲಿನ ದುಬಾರಿಯ ದಿನಗಳು ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿವೆ’ ಎಂದು ಆರೋಪಿಸಿದ್ದಾರೆ.
ಈ ಕುರಿತು ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಅಡುಗೆ ಅನಿಲ ಸಿಲಂಡರ್ ಬೆಲೆಯು ಬಿಜೆಪಿ ಸರ್ಕಾರ ದ ಮೇಲೆ ಶೇ.116ರಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡಿಸೇಲ್ ಬೆಲೆಯೂ ಶೇ.50ರಷ್ಟು ಹೆಚ್ಚಾಗಿವೆ. ಇದು ಬೇರೆಲ್ಲ ದಿನ ಬಳಕೆ ವಸ್ತುಗಳ ಮೇಲೆ ಪರಿಣಾಮ ಬೀರಿದ್ದು, ಜನರ ಬದುಕು ಹದಗೆಟ್ಟು ಹೋಗಿದೆ’ ಎಂದಿದ್ದಾರೆ.
‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲ ಬೆಲೆ ಶೇ.28ರಷ್ಟು ತಗ್ಗಿದೆ. ಕಚ್ಚಾ ತೈಲ ಬೆಲೆ ಶೇ.32ರಷ್ಟು ಕಡಿಮೆಯಾಗಿದೆ. ಹಾಗಿದ್ದಾಗ ಎಲ್ಲ ದರಗಳು ಸಹಜವಾಗಿ ಕೆಳಗಿಳಿಯಬೇಕಿತ್ತು. ಆದರೆ, ದೇಶದಲ್ಲಿ ಸರ್ಕಾರವು ದರವನ್ನು ಮನಬಂದಂತೆ ಹೆಚ್ಚಿಸುತ್ತಿದೆ. ಯಾವ ಕಾರಣದಿಂದ ಈ ರೀತಿ ಬೆಲೆ ಹೆಚ್ಚಿಸಲಾಗುತ್ತಿದೆ ಎನ್ನುವ ಕುರಿತು ಸ್ಪಷ್ಟೀಕರಣವನ್ನೂ ಬಿಜೆಪಿ ನೀಡುತ್ತಿಲ್ಲ. ಸರ್ಕಾರವು ಕೇವಲ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ಹೆಬ್ಬಾಳಕರ ಟೀಕಿಸಿದ್ದಾರೆ.
‘ಜನರು ಒಳ್ಳೆಯ ದಿನಗಳು ಬರುತ್ತವೆ ಎಂಬ ಬಿಜೆಪಿಯ ಘೋಷಣೆ ನಂಬಿ ಮತ ಕೊಟ್ಟು ಮೋಸ ಹೋಗಿದ್ದಾರೆ. ಕೊನೆಯ ಪಕ್ಷ ರೈತರು ಬೆಳೆಯುವ ಉತ್ಪನ್ನಗಳ ಬೆಲೆಯನ್ನಾದರೂ ಹೆಚ್ಚಿಸುವ ಕೆಲಸವನ್ನು ಈ ಸರ್ಕಾರ ಮಾಡಬೇಕಿತ್ತು. ಆದರೆ, ಆ ಕೆಲಸವನ್ನೂ ಮಾಡಲಾಗುತ್ತಿಲ್ಲ. ಬಡವರು ಹಾಗೂ ರೈತರ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ’ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.