‘ನಿರಾಶ್ರಿತರಿಗೆ ಕಾಯ್ದಿರಿಸಿದ್ದ 51 ಎಕರೆ ಕಬಳಿಕೆ’

7
ಭೀಮಪ್ಪ ಗಡಾದ ಆರೋಪ; ಕ್ರಮಕ್ಕೆ ಆಗ್ರಹ

‘ನಿರಾಶ್ರಿತರಿಗೆ ಕಾಯ್ದಿರಿಸಿದ್ದ 51 ಎಕರೆ ಕಬಳಿಕೆ’

Published:
Updated:
Deccan Herald

ಬೆಳಗಾವಿ: ‘ಹಿಡಕಲ್‌ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಹುಕ್ಕೇರಿ ತಾಲ್ಲೂಕು ಯಮಕನಮರಡಿ ಹೋಬಳಿ ಇಸ್ಲಾಂಪುರ ಗ್ರಾಮದ ನಿರಾಶ್ರಿತರಿಗೆ ಕಾಯ್ದಿರಿಸಲಾದ ಕೋಟ್ಯಂತರ ರೂಪಾಯಿ ಮೌಲ್ಯದ, ಫಲವತ್ತಾದ 51 ಎಕರೆ 4 ಗುಂಟೆ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಲಾಗಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಇಲ್ಲಿ ಆರೋಪಿಸಿದರು.

‘ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮೀಲಾಗಿ ಸರ್ಕಾರಕ್ಕೆ ಮೋಸ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಗೊತ್ತಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2017ರ ಸೆ. 16ರಂದು ಮಾಹಿತಿ ಕೋರಿ, ಹಿಡಕಲ್‌ ಡ್ಯಾಂ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಅರ್ಜಿ ಸಲ್ಲಿಸಲಾಗಿತ್ತು. ಆಗ, ದಾಖಲೆಗಳನ್ನು ಗೆದ್ದಲು ಹುಳುಗಳು ನಾಶಪಡಿಸಿದ್ದು, ಮಾಹಿತಿ ಕೊಡಲು ಆಗುವುದಿಲ್ಲ ಎಂದು ಉತ್ತರ ಕೊಟ್ಟಿದ್ದರು. ನಂತರ ಲಭ್ಯವಿದ್ದ ದಾಖಲೆಗಳೊಂದಿಗೆ ಅದೇ ವರ್ಷ ನ. 30ರಂದು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ತನಿಖೆಗೆ ಆಗ್ರಹಿಸಲಾಗಿತ್ತು. ಸರ್ಕಾರಿ ಜಮೀನಿನ ದಾಖಲೆಗಳನ್ನು ನುಂಗಿದ ಗೆದ್ದಲು ಹುಳುಗಳು ಯಾವುದು ಎಂದು ಪತ್ತೆ ಹಚ್ಚುವಂತೆ ಆಗ್ರಹಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.

ವರದಿ ಸಲ್ಲಿಕೆ: ‘ಡಿಸಿ ನಿರ್ದೇಶನದಂತೆ ತನಿಖೆ ನಡೆಸಿದ ಹುಕ್ಕೇರಿ ತಹಶೀಲ್ದಾರ್, ಯಾವುದೇ ಆದೇಶ ಅಥವಾ ದಾಖಲೆ ಇಲ್ಲದೇ ಸರ್ಕಾರಿ ಜಮೀನು ಕಬಳಿಸಲಾಗಿದೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ಭೂಕಬಳಿಕೆ ಪ್ರಕರಣದಲ್ಲಿ ಐವರು ಗ್ರಾಮಲೆಕ್ಕಿಗರು ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಜಿಲ್ಲಾಡಳಿತವು ತಪ್ಪಿತಸ್ಥರ ವಿರುದ್ಧ ಈವರೆಗೂ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ತಿಳಿಸಿದರು.

‘ರಿ.ಸ.ನಂ. 551ರಿಂದ 557ರವರೆಗಿನ ಜಮೀನುಗಳನ್ನು ಕಬಳಿಕೆ ಮಾಡಲಾಗಿದೆ. ಪಹಣಿ ಪತ್ರಿಕೆಯಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹೆಸರುಗಳನ್ನು ನಮೂದಿಸಲಾಗಿದೆ. ಆದರೆ, ನಿರಾಶ್ರಿತರ ‍ಪಟ್ಟಿಯಲ್ಲಿ ಇವರ ಹೆಸರಿಲ್ಲ. ಆದಾಗ್ಯೂ ಅವರ ಹೆಸರಿಗೆ ಜಮೀನು ಬಂದಿರುವುದು ಹೇಗೆ? ಇದರಲ್ಲಿ ಭೂಗಳ್ಳರ ಕೈವಾಡವಿರುವುದು ಸ್ಪಷ್ಟವಾಗುತ್ತದೆ’ ಎಂದು ತಿಳಿಸಿದರು.

‘ನೂತನ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಅವರು ಕೂಡಲೇ ಇತ್ತ ಗಮನಹರಿಸಬೇಕು. ತನಿಖೆ ನಡೆಸಬೇಕು. ಕಂದಾಯ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಸರ್ಕಾರಿ ಜಮೀನು ಭೂಗಳ್ಳರ ಪಾಲಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು’ ಎಂದು ಹೇಳಿದರು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

**

ಈ ಪ್ರಕರಣದಲ್ಲಿ ಸ್ಥಳೀಯ ಶಾಸಕ ಸತೀಶ ಜಾರಕಿಹೊಳಿ ಪ್ರಭಾವ ಇರುವ ಅನುಮಾನವಿದೆ.
–ಭೀಮಪ್ಪ ಗಡಾದ, ಮಾಹಿತಿ ಹಕ್ಕು ಕಾರ್ಯಕರ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !