ಮೂಡಲಗಿ (ಬೆಳಗಾವಿ): ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆಗೆ ಶಾಸಕಾಂಗ ಸ್ಪಂದಿಸದ ಕಾರಣ ಕಾನೂನಾತ್ಮಕ ಬೆಂಬಲ ಪಡೆಯಲು ಸೆಪ್ಟೆಂಬರ್ 22ರಂದು ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ರಾಜ್ಯ ಸಮಾವೇಶ ಆಯೋಜಿಸಲಾಗಿದೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ಮೂರೂವರೆ ವರ್ಷದಿಂದ ಪಂಚಮಸಾಲಿ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸಿದರೂ ಸ್ಪಂದನ ಸಿಗದ ಕಾರಣ ಈಗ 7ನೇ ಹಂತದ ಹೋರಾಟ ಆರಂಭಿಸಿದ್ದೇವೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಜ್ಯದಲ್ಲಿ ಎಲ್ಲ ಕಡೆ ಪಂಚಮಸಾಲಿ ನೂತನ ಘಟಕಗಳನ್ನು ಮಾಡಲಾಗುತ್ತಿದ್ದು, ಹಿರಿಯ ವಕೀಲರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಿದ್ದೇವೆ. ಬೆಳಗಾವಿ ಸಮಾವೇಶದಲ್ಲಿ ಕಿತ್ತೂರ ಮತ್ತು ಕಲ್ಯಾಣ ಕರ್ನಾಟದಿಂದ 5 ಸಾವಿರ ವಕೀಲರು ಭಾಗವಹಿಸುವರು. ವಕೀಲರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು’ ಎಂದರು.