ಶಾಸಕರ ಭತ್ಯೆ; ₹ 235 ಕೋಟಿ ವ್ಯಯ

7

ಶಾಸಕರ ಭತ್ಯೆ; ₹ 235 ಕೋಟಿ ವ್ಯಯ

Published:
Updated:

ಬೆಳಗಾವಿ: ಕಳೆದ ಸರ್ಕಾರದಲ್ಲಿ ವಿವಿಧ ಭತ್ಯೆಗಳ ಹೆಸರಿನಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ₹ 235.95 ಕೋಟಿ ಪಾವತಿಸಲಾಗಿದೆ ಎನ್ನುವ ಅಂಶ ಮಾಹಿತಿ ಹಕ್ಕು ಕಾಯ್ದೆಯಿಂದ (ಆರ್‌ಟಿಐ) ಬಹಿರಂಗವಾಗಿದೆ.

2013ರ ಮೇ 21ರಿಂದ 2018 ಏಪ್ರಿಲ್‌ 31ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸದಸ್ಯರಿಗೆ ವೇತನ, ಪ್ರಯಾಣ ಭತ್ಯೆ, ವಿದೇಶಿ ಪ್ರವಾಸ, ರೈಲ್ವೆ ಪ್ರಯಾಣ ಭತ್ಯೆ ಹಾಗೂ ವೈದ್ಯಕೀಯ ವೆಚ್ಚಗಳಿಗಾಗಿ ಈ ಹಣ ಪಾವತಿಸಲಾಗಿದೆ. ವಿಧಾನಸಭೆಯ 224 ಸದಸ್ಯರಿಗೆ ₹ 203.17,34,570 ಹಾಗೂ ವಿಧಾನ ಪರಿಷತ್‌ನ 75 ಸದಸ್ಯರಿಗೆ ₹ 32.78,28,091 ಪಾವತಿಸಲಾಗಿದೆ.

‘ರಾಜ್ಯದ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಪನ್ಮೂಲ ಕ್ರೋಢಿಕರಿಸಲಾಗುತ್ತದೆ. ಈ ಸಂಪನ್ಮೂಲದಲ್ಲಿಯೇ ಶಾಸಕರು ಕೋಟ್ಯಾಂತರ ರೂಪಾಯಿ ವೇತನ ಹಾಗೂ ಭತ್ಯೆ ಪಡೆದು ಕೊಳ್ಳುತ್ತಿದ್ದಾರೆ. ಆದರೆ, ಬಹಳಷ್ಟು ಜನ ಶಾಸಕರು ಅಧಿವೇಶನದ ಕಲಾಪಗಳಲ್ಲಿ ಹಾಜರಾಗುವುದಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸುವುದಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವುದಿಲ್ಲ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದರು.

‘₹ 500 ಕರೆನ್ಸಿ ಹಾಕಿಸಿದರೆ ಮೂರು ತಿಂಗಳು ಮೊಬೈಲ್‌ನಲ್ಲಿ ಮಾತನಾಡಲು ಅವಕಾಶ ಇರುವಾಗ ₹ 60,000 ದೂರವಾಣಿ ಭತ್ಯೆ ನೀಡಿರುವುದು ಏತಕ್ಕಾಗಿ? ಸಾರ್ವಜನಿಕರ ಹಣ ದುಂದು ವೆಚ್ಚ ಮಾಡಿದಂತಲ್ಲವೇ’ ಎಂದು ಪ್ರಶ್ನಿಸಿದರು.

‘ಇದುವರೆಗೆ, ಮಾಜಿ ಶಾಸಕರು ಬದುಕಿರುವವರೆಗೆ ಪಿಂಚಣಿ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸರ್ಕಾರವು ಹೊಸ ತೀರ್ಮಾನ ಕೈಗೊಂಡಿದ್ದು, ಇದರ ಪ್ರಕಾರ, ಇನ್ನು ಮುಂದೆ ಮಾಜಿ ಶಾಸಕರ ಮರಣಾನಂತರ ಪತ್ನಿಗೆ ಪಿಂಚಣಿ ಮುಂದುವರಿಯಲಿದೆ. ಇದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

ವಿಧಾನಸಭಾ ಸದಸ್ಯರ ವೆಚ್ಚ;

ವೇತನ, ಇತರ ಭತ್ಯೆ– ₹ 90.24 ಕೋಟಿ

ವಸತಿ ಭತ್ಯೆ– ₹ 63.68 ಲಕ್ಷ

ವಿದೇಶಿ ಪ್ರವಾಸ, ರೈಲ್ವೆ ಪ್ರಯಾಣ, ಅಧಿವೇಶನ ಭತ್ಯೆ– ₹ 106.43 ಕೋಟಿ

ವೈದ್ಯಕೀಯ ವೆಚ್ಚ– ₹ 5.86 ಕೋಟಿ

******

ವಿಧಾನ ಪರಿಷತ್‌ ಸದಸ್ಯರ ವೆಚ್ಚ

ವೇತನ, ದೂರವಾಣಿ ಭತ್ಯೆ, ಕ್ಷೇತ್ರ ಭತ್ಯೆ– ₹ 28.63 ಕೋಟಿ

ವೈದ್ಯಕೀಯ ವೆಚ್ಚ– ₹ 3.22 ಕೋಟಿ

*****
 ಪ್ರತಿ ತಿಂಗಳು ಶಾಸಕರಿಗೆ ನೀಡುವ ವೇತನ ಭತ್ಯೆಗಳ ವಿವರ;

ವೇತನ– ₹ 25,000

ದೂರವಾಣಿ ವೆಚ್ಚ– ₹ 20,000

ಕ್ಷೇತ್ರದ ಭತ್ಯೆ– ₹ 40,000

ಅಂಚೆ ವೆಚ್ಚ– ₹ 5,000

ಆಪ್ತ ಸಹಾಯಕ, ಕೊಠಡಿ ಸೇವಕರ ಭತ್ಯೆ– ₹ 10,000

ಒಟ್ಟು ₹ 1 ಲಕ್ಷ

********
 ಪ್ರಯಾಣ ಭತ್ಯೆ:

ಪ್ರಯಾಣ ಭತ್ಯೆ ಕಿ.ಮೀಗೆ – ₹ 25

ದಿನಭತ್ಯೆ, ರಾಜ್ಯ ಪ್ರವಾಸ– ₹ 2,000

ಹೊರರಾಜ್ಯದ ಪ್ರವಾಸ– ₹ 2,500

ಹೋಟೆಲ್‌ ವಾಸ್ತವ್ಯ– ₹ 5,000

ಸ್ಥಳೀಯ ಸಾರಿಗೆ (ರಾಜ್ಯದ ಹೊರಗೆ)– ₹ 1,500

* ವಿಮಾನ ಪ್ರಯಾಣ, ರೈಲ್ವೆ ಪ್ರಯಾಣ– ₹ 2 ಲಕ್ಷ (ವರ್ಷದಲ್ಲಿ ಎರಡು ಕಂತುಗಳಲ್ಲಿ ಪಾವತಿ)

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !