ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಸೆರೆಗೆ ಬೆಳಗಾವಿಯತ್ತ ಹೊರಟ ಜೋಡಿ ಆನೆ

Last Updated 23 ಆಗಸ್ಟ್ 2022, 13:17 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಗಾಲ್ಫ್‌ ಮೈದಾನದಲ್ಲಿ ಅವಿತುಕೊಂಡ ಚಿರತೆ ಸೆರೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್‌ ಶಿಬಿರದಿಂದ ಎರಡು ಆನೆಗಳನ್ನು ಕರೆಸಲಾಗುತ್ತಿದೆ. ಮಂಗಳವಾರ ಬೆಳಿಗ್ಗೆಯೇ ಎರಡು ಆನೆ ಹಾಗೂ ಎಂಟು ಪರಿಣತ ಸಿಬ್ಬಂದಿಯ ತಂಡ ಬೆಳಗಾವಿಯತ್ತ ಹೊರಟಿದೆ.

ಸಕ್ರೆಬೈಲ್‌ ಆನೆ ತರಬೇತಿ ಕ್ಯಾಂಪಿನಲ್ಲಿದ್ದ 20 ವರ್ಷ ವಯಸ್ಸಿನ ಅರ್ಜುನ ಹಾಗೂ 14 ವರ್ಷ ಪ್ರಾಯದ ಆಲೆ ಎಂಬ ಆನೆಗಳನ್ನು ಕರೆಸಲಾಗುತ್ತಿದೆ. ಈ ಎರಡೂ ಆನೆಗಳು ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿವೆ. ಆದರೆ, ಇದೇ ಮೊದಲ ಬಾರಿಗೆ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಸಕ್ರೆಬೈಲ್‌ ಶಿಬಿರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಣ್ಣು– ಗಂಡು ಜೋಡಿ ಆನೆಗಳ ಜತೆಗೆ ಅರಿವಳಿಕೆ ತಜ್ಞ ಡಾ.ವಿನಯ್‌, ತಲಾ ಒಬ್ಬ ಮಾವುತ ಹಾಗೂ ಕಾವಾಡಿಗ ಸೇರಿ ಎಂಟು ಜನರ ತಂಡ ಬೆಳಗಾವಿಗೆ ಹೊರಟಿದೆ. ರಾತ್ರಿ 8ರ ನಂತರ ನಗರ ತಲುಪುವ ಸಾಧ್ಯತೆ ಇದೆ ಎಂದು ಇಲ್ಲಿನ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಆನೆಗಳನ್ನು ಕಾರ್ಯಾಚರಣೆಗೆ ಇಳಿಸುವ ಸಾಧ್ಯತೆ ಇದೆ.

ಕೌತುಕದಲ್ಲಿ ಬೆಳಗಾವಿ ಜನ:ಜಿಲ್ಲೆಯ ಅರಣ್ಯ ಪ್ರದೇಶದ ಸುತ್ತಲಿನ ಹಳ್ಳಿಗಳಲ್ಲಿ ಚಿರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಕಳೆದ 19 ದಿನಗಳಿಂದ ನಗರದ ಜನವಸತಿ ಪ್ರದೇಶದಲ್ಲೇ ಚಿರತೆ ಬೀಡುಬಿಟ್ಟಿದ್ದು ಇದೇ ಮೊದಲು. ಹಾಗಾಗಿ, ಚಿರತೆ ಕಾರ್ಯಾಚರಣೆಯ ಸನ್ನಿವೇಶಗಳು ಬೆಳಗಾವಿ ಜನರಿಗೆ ಹೊಸ ಅನುಭವ ನೀಡಿವೆ.

ಈಗ ಆನೆಗಳನ್ನು ಬಳಸಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಮತ್ತಷ್ಟು ಕೌತುಕ ಮೂಡಿಸಿದೆ. ಮೂರು ವಾರಗಳಿಂದ ಅತ್ಯಂತ ಕುತೂಹಲ ಕೆರಳಿಸಿರುವ ಚಿರತೆಯ ಕಾರ್ಯಾಚರಣೆ ಈಗ ಮತ್ತೊಂದು ಹಂತ ದಾಟಿದೆ. ಹೀಗಾಗಿ, ಜಿಲ್ಲೆಯ ಜನರ ಮೊಬೈಲ್‌ಗಳಲ್ಲಿ, ಬಾಯಲ್ಲಿ ಈಗ ಆನೆ– ಚಿರತೆಗಳದ್ದೇ ಸುದ್ದಿ ಹರಿದಾಡುತ್ತಿದೆ.

ಮತ್ತೆರಡು ಕಾರ್ಯಾಚರಣೆ ವಿಫಲ:ಸೋಮವಾರ ಬೆಳಿಗ್ಗೆ ಖಾಸಗಿ ಬಾಸ್‌ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾದ ಚಿರತೆ, ಎರಡು ತಾಸು ಜನವಸತಿ ಪ್ರದೇಶದಲ್ಲೇ ಸುಳಿದಾಡಿತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ ಕೂಡ ವಿಫಲವಾಯಿತು. ಸಂಜೆಯ ವೇಳೆಗೆ ಹುಕ್ಕೇರಿಯಿಂದ 20 ಬೇಟೆ ನಾಯಿಗಳನ್ನು ಬಳಸಿ ಚಿರತೆ ಅವಿತ ಸ್ಥಳ ಪತ್ತೆ ಮಾಡಲು ಯತ್ನಿಸಲಾಯಿತು. ಆದರೆ, ಈ ಪ್ರದೇಶದಲ್ಲಿ ಕಿರು ಕಾಡುಅತ್ಯಂತ ದಟ್ಟವಾಗಿ ಬೆಳೆದಿದ್ದರಿಂದ ನಾಯಿಗಳು ಹೆಚ್ಚು ದೂರ ಓಡಲು ಆಗಲಿಲ್ಲ. ಹೀಗಾಗಿ, ಈ ಯತ್ನವೂ ವಿಫಲವಾಯಿತು.

ಕ್ವಾಡ್‌ ಕಾಪ್ಟರ್ ಬಳಕೆಗೆ ಅಡ್ಡಿ:ಮಂಗಳವಾರ ಬೆಳಿಗ್ಗೆ ‘ಕ್ವಾಡ್‌ ಕಾಪ್ಟರ್ ಡ್ರೋನ್‌’ಗೆ ಥರ್ಮಲ್‌ ಕ್ಯಾಮೆರಾ ಅಳವಡಿಸಿ ಚಿರತೆ ಇರುವ ಜಾಗ ಪತ್ತೆ ಮಾಡಲು ಸಿಬ್ಬಂದಿ ಮುಂದಾದರು. ಬೆಂಗಳೂರಿನಿಂದ ಬಂದ ಜರ್ವಿಸ್‌ ಸರ್ಡಾನ ಅವರು ತಮ್ಮ ಸುಧಾರಿತ ಡ್ರೋನ್‌ ಸಲಕರಣೆ ತಂದು ಡೆಮೊ ತೋರಿಸಿದರು. ಮಾಂಸ–ಖಂಡಗಳಿರುವ ಯಾವುದೇ ಜೀವಿ ಎಲ್ಲಿ ಅವಿತಿದ್ದರೂ ಅದರ ಜಾಗ ಪತ್ತೆ ಮಾಡುವ ವ್ಯವಸ್ಥೆ ಈ ಯಂತ್ರದಲ್ಲಿದೆ. ಆದರೆ, ಚಿರತೆ ಅವಿತಿರುವ ಜಾಗ ಕೇಂದ್ರ ರಕ್ಷಣಾ ಇಲಾಖೆಗೆ ಒಳಪಟ್ಟಿದೆ. ಅಲ್ಲಿ ಅನುಮತಿ ಇಲ್ಲದೇ ಡ್ರೋನ್‌ ಬಳಕೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆ, ‘ಚಿರತೆ ಅವಿತ ಜಾಗವು ರಕ್ಷಣಾ ಇಲಾಖೆಗೆ ಒಳಪಟ್ಟಿದ್ದರಿಂದ ಇತಿಮಿತಿಯಲ್ಲೇ ಕಾರ್ಯಾಚರಣೆ ಮಾಡಬೇಕಾಗಿದೆ. ಕ್ವಾಡ್‌ ಕಾಪ್ಟರ್‌ ಬಳಕೆಗೆ ಅನುಮತಿ ‍ಪಡೆಯಲು ಚಿಂತಿಸಲಾಗಿದೆ. ಆದರೆ, ಅದಕ್ಕೆ ಒಂದು ತಿಂಗಳ ಕಾಲಾವಕಾಶ ಹಿಡಿಯಬಹುದು. ಹೀಗಾಗಿ, ಇದೂ ಕೂಡ ಯಶಸ್ವಿಯಾಗುವುದು ಕಷ್ಟ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT